ವಾಷಿಂಗ್ಟನ್, ಮೇ 19 : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೋನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಒಂದು ವಾರದಿಂದ ಮಲೇರಿಯಾ ವಿರೋಧಿ ಹೈಡ್ರೊಕ್ಸಿಕ್ಲೋರೋಕ್ವಿನ್ ಔಷಧಿಯನ್ನು ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ವೈಟ್ ಹೌಸ್ ನ ಸಿಬ್ಬಂದಿಯೊಬ್ಬರಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆಯಾಗಿತ್ತು. ಉಪಾಧ್ಯಕ್ಷ ಮೈಕ್ ಪೆನ್ಸ್ ಅವರ ಪತ್ರಿಕಾ ಕಾರ್ಯದರ್ಶಿ ಗೆ ಕೊರೊನಾ ಸೋಂಕು ತಗುಲಿರುವುದನ್ನು ಕೆಲವು ದಿನಗಳ ಹಿಂದೆ ಶ್ವೇತಭವನ ದೃಢ ಪಡಿಸಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂಜಾಗ್ರತಾ ಕ್ರಮವಾಗಿ ಪ್ರತಿ ನಿತ್ಯವೂ ಕೊರೊನಾ ಸೋಂಕಿನ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಅದರ ಜೊತೆಗೆ ಕೊರೋನಾ ಸೋಂಕು ತಗುಲದಂತೆ ದಿನವೂ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಸೇವಿಸುತ್ತಿದ್ದೇನೆ ಎಂಬ ವಿಷಯವನ್ನು ಅವರು ಶ್ವೇತಭವನದಲ್ಲಿ ಸುದ್ದಿಗಾರರಿಗೆ ಡೊನಾಲ್ಡ್ ಟ್ರಂಪ್ ತಿಳಿಸಿದರು.
ವೈದ್ಯರು ಯಾವುದನ್ನೂ ಶಿಫಾರಸು ಮಾಡಿಲ್ಲ. ಆದರೆ, ನಾನು ಪ್ರತಿ ದಿನ ಮಲೇರಿಯಾ ವಿರುದ್ಧದ ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬ ಔಷಧ ತೆಗೆದು ಕೊಳ್ಳುತ್ತಿದ್ದೇನೆ. ಕೆಲ ಸಮಯ ಆದ ನಂತರ ನಿಲ್ಲಿಸುತ್ತೇನೆ. ಆದಷ್ಟು ಬೇಗನೆ ಕೊರೋನಾ ಸೋಂಕಿಗೆ ಚಿಕಿತ್ಸೆ ಅಥವಾ ಲಸಿಕೆ ಕಂಡುಹಿಡಿಯುವುದನ್ನು ನಾನು ಬಯಸುತ್ತೇನೆ. ಅದು ಶೀಘ್ರದಲ್ಲಿಯೇ ಆಗಲಿದೆ ಎಂದು ಟ್ರಂಪ್ ಭರವಸೆ ವ್ಯಕ್ತಪಡಿಸಿದ್ದಾರೆ. ಇಲ್ಲಿಯವರೆಗೆ ಅಮೆರಿಕದಲ್ಲಿ 90 ಸಾವಿರ ಜನರನ್ನು ಬಲಿಪಡೆದುಕೊಂಡಿರುವ ಕೊರೊನಾ ಸೋಂಕಿನ ಯಾವುದೇ ಸಣ್ಣ ಲಕ್ಷಣಗಳು ಕೂಡಾ ತಮ್ಮಗಿಲ್ಲ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಶ್ವೇತಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗಿನ ಸಂವಾದದ ವೇಳೆ ಒಂದೂವರೆ ವಾರದಿಂದ ನಾನು ನಿತ್ಯವೂ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ತೆಗೆದುಕೊಳ್ಳುತ್ತಿರುವುದಾಗಿ ಟ್ರಂಪ್ ಹೇಳಿಕೆ ನೀಡಿರುವ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷರ ಆರೋಗ್ಯ ಚೆನ್ನಾಗಿರುವುದಾಗಿ ಶ್ವೇತಭವನದ ವೈದ್ಯರು ಸ್ಪಷ್ಪಪಡಿಸಿದ್ದಾರೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಟ್ರಂಪ್ ಅವರು ಭಾರತದ ಮೇಲೆ ಒತ್ತಡ ಹಾಕಿ ಅಮೆರಿಕಕ್ಕೆ ತರಿಸಿಕೊಂಡಿದ್ದರು. ಕೆಲವು ಸಂಶೋಧನಾ ವರದಿಗಳು ಮಲೇರಿಯಾ ರೋಗಕ್ಕೆ ಮದ್ದಾಗಿ ನೀಡುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವು ಕೊರೋನಾ ರೋಗಕ್ಕೆ ಪರಿಣಾಮಕಾರಿ ಎಂದು ಹೇಳಿತ್ತು. ಆದರೆ, ನಂತರದ ಪ್ರಯೋಗಗಳಲ್ಲಿ ಈ ಔಷಧ ಕೋವಿಡ್ ರೋಗಿಗಳಿಗೆ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ ಎಂದು ತಿಳಿದು ಬಂದಿತು. ಆದರೂ ಕೂಡ ಡೊನಾಲ್ಡ್ ಟ್ರಂಪ್ ಅವರು ಮುಂಜಾಗ್ರತಾ ಕ್ರಮವಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಸೇವಿಸುತ್ತಿರುವುದನ್ನು ಬಹಿರಂಗ ಪಡಿಸಿದ್ದಾರೆ.ಟ್ರಂಪ್ ಅವರು ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ತೆಗೆದುಕೊಳ್ಳುತ್ತಿರುವುದನ್ನು ವಿಪಕ್ಷವಾದ ಡೆಮೋಕ್ರಾಟ್ನವರು ಟೀಕೆ ಮಾಡಿದ್ದಾರೆ.








