ಎಚ್ಐವಿ ಸೋಂಕು ಅನ್ವೇಷಕ ಲುಕ್ ಮೊಂಟಾಗ್ನಿಯರ್ ನಿಧನ Saaksha Tv
ಪ್ಯಾರಿಸ್: ಎಚ್‌ಐವಿ ಸೋಂಕು ಕಂಡುಹಿಡಿದಿದ್ದ ಫ್ರೆಂಚ್ ಸಂಶೋಧಕ ವಿಜ್ಞಾನಿ ಲುಕ್ ಮೊಂಟಾಗ್ನಿಯರ್ (89) ಕೊನೆಯುಸಿರೆಳೆದಿದ್ದಾರೆ.
ಮಂಗಳವಾರ ರಾಜಧಾನಿ ಪ್ಯಾರಿಸ್ ನ ಪಶ್ಚಿಮ ಉಪನಗರವಾದ ನ್ಯೂಲ್ಲಿ-ಸುರ್-ಸೈನ್‌ನಲ್ಲಿರುವ ಅಮೆರಿಕನ್ ಹಾಸ್ಪಿಟಲ್ ಆಫ್ ಪ್ಯಾರಿಸ್‌ನಲ್ಲಿ ಲೂಕ್ ಕೊನೆಯುಸಿರೆಳೆದಿದ್ದಾರೆ. ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.
18 ಆಗಸ್ಟ್, 1932ರಂದು ಫ್ರಾನ್ಸ್‌ನ ಛಾಬ್ರಿಸ್ ಎಂಬಲ್ಲಿ ಲೂಕ್ ಮೊಂಟಾಗ್ನಿಯರ್ ಜನಿಸಿದರು. ಲೂಕ್ ವೈರಾಲಜಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ವಿಜ್ಞಾನದಲ್ಲಿ ಸಾಕಷ್ಟು ಆಸಕ್ತಿಯಿದ್ದ ಅವರು, ವಿಜ್ಞಾನ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆ ಮಾಡಿದ್ಧಾರೆ.
ಫ್ರಾನ್ಸ್‌ನ ಪೊಯಿಟಿಯರ್ಸ್ ವಿಶ್ವವಿದ್ಯಾಲಯದಲ್ಲಿ ವಿಜ್ಞಾನಕ್ಕೆ ಸಂಬಂಧಿದಂತೆ ಉನ್ನತ ಶಿಕ್ಷಣ ಪಡೆದರು. 1961 ರಲ್ಲಿ, ಮೊಂಟಾಗ್ನಿಯರ್ ಡೊರೊಥಿಯಾ ಅಕರ್ಮನ್ ಅವರನ್ನು ವಿವಾಹವಾದರು ಮತ್ತು ಅವರಿಗೆ ಮೂರು ಮಕ್ಕಳಿದ್ದರು.
1983ರಲ್ಲಿ ಏಡ್ಸ್‌ಗೆ ಕಾರಣವಾಗುವ ವೈರಸ್ ಅನ್ನು ಕಂಡು ಹಿಡಿದರು. ಈ ಮೂಲಕ 2008ರಲ್ಲಿ ವೈದ್ಯಕೀಯ ನೊಬೆಲ್ ಪ್ರಶಸ್ತಿ ಲೂಕ್ ಅವರಿಗೆ ದೊರೆಯಿತು. ಇದನ್ನು ತಮ್ಮ ಸಹೋದ್ಯೋಗಿ ಫ್ರಾಂಕೋಯಿಸ್ ಬ್ಯಾರೆ ಸಿನೋಸ್ಸಿ ಜೊತೆ ಪ್ರಶಸ್ತಿ ಹಂಚಿಕೊಂಡಿದ್ದರು.
ನೊಬೆಲ್ ಪ್ರಶಸ್ತಿ ಪಡೆಯುವ ಮೊದಲು ಹಾಗೂ ಪಡೆದ ನಂತರವೂ ಲೂಕ್ ಮೊಂಟಾಗ್ನಿಯರ್ ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾದರು. 1986ರಲ್ಲಿ ನ್ಯಾಷನಲ್ ಆರ್ಡರ್ ಆಫ್ ಮೆರಿಟಿ, ಲೀಜನ್ ಡಿ ಹಾನರ್ ಸೇರಿದಂತೆ 20ಕ್ಕೂ ಹೆಚ್ಚು ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರಗಳನ್ನು ಭಾಜನಾದರು.
ಅವರು ಲಾಸ್ಕರ್ ಪ್ರಶಸ್ತಿ, ಷೀಲೆ ಅವಾರ್ಡ್, ಲೂಯಿಸ್ ಜೆಯಾಂಟೆಟ್ ಪ್ರೈಜ್ ಪಾರ್ ಮೆಡಿಸಿನ್ 1987ರಲ್ಲಿ ಗೋಲ್ಡನ್ ಪ್ಲೇಟ್ ಪ್ರಶಸ್ತಿ, ಅರಬ್‌ನ ನೊಬೆಲ್ ಪ್ರಶಸ್ತಿ ಎಂದೇ ಕರೆಯಲಾಗುವ ಕಿಂಗ್ ಫೈಸಲ್ ಇಂಟರ್ ನ್ಯಾಷನಲ್ ಪ್ರಶಸ್ತಿಗಳೂ ಇವರನ್ನು ಅರಸಿ ಬಂದವು.








