ನವದೆಹಲಿ : ವಿಶ್ವವನ್ನೇ ತಲ್ಲಣಗೊಳಿಸಿರುವ ಕಣ್ಣಿಗೆ ಕಾಣದ ಕೊರೊನಾ ವೈರಸ್ ಗೆ ಇಡೀ ಜಗತ್ತೇ ತಲೆ ಬಾಗಿದೆ. ಈ ಮಹಾಮಾರಿ ಈಗಾಗಲೇ ಲಕ್ಷಾಂತರ ಮಂದಿಯನ್ನು ಬಲಿ ಪಡೆದುಕೊಂಡಿದ್ದು, ಅನೇಕರು ಸೋಂಕಿನಿಂದ ಬಳಲುತ್ತಿದ್ದಾರೆ. ಇನ್ನು ಈ ಸೋಂಕಿನಿಂದ ಪಾರಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವೈದ್ಯರು ತಿಳಿಸಿದ್ದಾರೆ.
ಕೊರೊನಾ ಸೋಂಕು ತಡೆಗಾಗಿ ಎಲ್ಲರೂ ಸಾಮಾಜಿಕ ಅಂತರ ಕಾಪಿಟ್ಟಿಕೊಳ್ಳುತ್ತಿದ್ದರೇ, ಮತ್ತೊಂಡೆದೆ ಅಂತರ ಕಾಯ್ದುಕೊಂಡೇ ಪ್ರೀತಿಪಾತ್ರರನ್ನು ಹಗ್ ಮಾಡಲು ಪ್ಲಾಸ್ಟಿಕ್ ಪರದೆಯ ಆವಿಷ್ಕಾರವಾಗಿದೆ.
ಈ ಹಿಂದೆ ಕ್ಯಾಲಿಫೋರ್ನಿಯಾದ 10 ವರ್ಷದ ಬಾಲಕಿ ಪೈಜ್ ತನ್ನ ಅಜ್ಜನನ್ನು ಹಗ್ ಮಾಡಲು ಪ್ಲಾಸ್ಟಿಕ್ ಪರದೆ ತಯಾರಿಸಿದ್ದಳು. ಈ ಮೂಲಕ ಸಾಮಾಜಿಕ ಅಂತರ ನಿಯಮ ಪಾಲಿಸಿ ತನ್ನ ಅಜ್ಜನನ್ನು ಬಿಗಿದಪ್ಪಿದ್ದಳು. ಈ ಬಾಲಕಿಯಿಂದ ಸ್ಫೂರ್ತಿ ಪಡೆದು ಇದೀಗ ಇಂಗ್ಲೆಂಡ್ ನ ವ್ಯಕ್ತಿಯೊಬ್ಬರು ಅದೇ ರೀತಿಯ ಪರದೆ ತಯಾರಿಸಿ ತನ್ನ ಅಜ್ಜಿಯನ್ನು ತಬ್ಬಿಕೊಂಡು ಸಂತಸ ಪಟ್ಟಿದ್ದಾರೆ.
ಆಂಟೋನಿ ಕವಿನ್ ಎಂಬುವವರು ಈ ಪ್ಲಾಸ್ಟಿಕ್ ಪರದೆಯನ್ನು ತಯಾರಿಸಿದ್ದು, ಹಾಳೆಯ ಕರ್ಟನ್ ನ್ನು ತಮ್ಮ ಅಜ್ಜ, ಅಜ್ಜಿ ಇರುವ ಮನೆಯಲ್ಲಿ ಅಳವಡಿಸಿದ್ದಾರೆ. ಇದನ್ನು ನೋಡಿದ ಆಂಟೋನಿ ಅಜ್ಜಿ ಆಶ್ಚರ್ಯಚಕಿತರಾಗಿ ಕಣ್ಣೀರು ಹಾಕುವ ಮೂಲಕ ಭಾವನಾತ್ಮಕವಾಗಿ ಆಟೋನಿಯವರನ್ನು ಬಿಗಿದಪ್ಪಿದ್ದಾರೆ. ಈ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಮಿರಿಯಮ್ ಕಾವಿನ್ ಎಂಬ ಫೇಸ್ಬುಕ್ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಸದ್ಯ ಈ ವಿಡಿಯೋ 5.4 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. 78 ಸಾವಿರಕ್ಕೂ ಅಧಿಕ ಜನ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಅಲ್ಲದೆ ಎರಡುಲಕ್ಷದಷ್ಟು ಜನ ಶೇರ್ ಮಾಡಿದ್ದಾರೆ.
https://twitter.com/anandmahindra/status/1262748887145566209?s=20
ಅಲ್ಲದೆ ಈ ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. “ಈ ಡಿವೈಸ್ ತಯಾರಿಸಲು ನೋಬೆಲ್ ಪುರಸ್ಕೃತರೇ ಆಗಬೇಕಿಲ್ಲ. ತಮ್ಮ ಕುಟುಂಬಸ್ಥರನ್ನು ಮಿಸ್ ಮಾಡಿಕೊಳ್ಳುತ್ತಿರುವವರೇ ಸಾಕು. ಈ ಆವಿಷ್ಕಾರವೂ ಜೀವನವನ್ನು ಬದಲಾಯಿಸುವಂಥದ್ದಾಗಿದೆ. ನಾವೆಲ್ಲರೂ ಕಾಯುತ್ತಿರುವ ಕೊರೊನಾ ಲಸಿಕೆಯಷ್ಟೇ ಮುಖ್ಯವಾಗಿದೆ” ಎಂದು ಬರೆದುಕೊಂಡಿದ್ದಾರೆ.








