ನವದೆಹಲಿ : ಮನುಕುಲಕ್ಕೆ ಕಂಟಕವಾಗಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಗೆ ವಿಶ್ವದಾದ್ಯಂತ 50,00,599 ಮಂದಿ ತುತ್ತಾಗಿದ್ದಾರೆ. ಈ ಸೋಂಕಿತರ ಪೈಕಿ 19,70,918 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆ ಸೇರಿದಾರೆ. 3,25,156 ಮಂದಿ ವೈರಸ್ ಗೆ ಸಾವನ್ನಪ್ಪಿದ್ದಾರೆ. ಸದ್ಯ 27,04,525 ಸಕ್ರಿಯ ಕೊರೊನಾ ಪ್ರಕರಣಗಳಿದ್ದು, 26,59,096 ಜನರಿಗೆ ಸಣ್ಣ ಪ್ರಮಾಣದ ಸೋಂಕಿನ ಲಕ್ಷಣಗಳಿದ್ದವರು ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಉಳಿದಂತೆ 45,429 ಮಂದಿ ತೀವ್ರ ನಿಗಾ ಘಟಕದಲ್ಲಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಮೊದಲ ಸ್ಥಾನದಲ್ಲಿ ಅಮೆರಿಕಾ
ಕೊರೊನಾ ಪೀಡಿತ ರಾಷ್ಟ್ರಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಅಮೆರಿಕದಲ್ಲಿ ಇದುವರೆಗೂ 15,70,583 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿ ರಷ್ಯಾ ಇದ್ದು, 3,08,705 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಸ್ಪೇನ್ ಸದ್ಯ ಮೂರನೇ ಸ್ಥಾನದಲ್ಲಿದ್ದು, 2,78,803 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇನ್ನು ಭಾರತದಲ್ಲೂ ಕೊರೊನಾ ಪೀಡಿತರ ಸಂಖ್ಯೆ ಲಕ್ಷದ ಗಡಿ ದಾಟಿದ್ದು, ಈ ವರೆಗೂ 1,07,021 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ 3,303 ಮಂದಿ ಸಾವನ್ನಪ್ಪಿದರೇ 42,379 ಮಂದಿ ಗುಣಮುಖರಾಗಿದ್ದಾರೆ..








