ಬೆಂಗಳೂರು : ಇಂದು ಮಧ್ಯಾಹ್ನ 1.25ರ ಸುಮಾರಿಗೆ ಬೆಂಗಳೂರು ಸೇರಿದಂತೆ ಬೆಂಗಳೂರು ಸುತ್ತ ಮುತ್ತ ಕೋಲಾರದ ಕೆಲವೆಡೆ ಬಾರೀ ದೊಡ್ಡ ಶಬ್ದ ಕೇಳಿಸಿದೆ. ಆರಂಭದಲ್ಲಿ ಈ ಶಬ್ದ ಕೇಳಿಸಿದಾಗ ಇದರ ಮೂಲ ತಿಳಿಯಲಿಲ್ಲ. ಆದರೆ ಇದೀಗ ಈ ಶಬ್ದ ಹೇಗೆ ಬಂತು ಎಂದು ಗೊತ್ತಾಗಿದ್ದು, ಇದು ಸುಖೋಯ್ ಯುದ್ಧವಿಮಾನದ್ದು ಆಗಿರಬಹುದು ಎಂದು ವಿಂಗ್ ಕಮಾಂಡರ್ ಸುದರ್ಶನ್ ಹೇಳಿದ್ದಾರೆ.
ಈ ಬಗ್ಗೆ ಸುದರ್ಶನ್ ಅವರು ತಮ್ಮ ಫೇಸ್ ಬುಕ್ ನಲ್ಲಿ ಸ್ಟೇಟಸ್ ಅಪ್ ಡೇಟ್ ಮಾಡಿದ್ದಾರೆ.
ಇಂದು ಮಧ್ಯಾಹ್ನ 1.20ರ ಸಮಯದಲ್ಲಿ ಬೆಂಗಳೂರಿನಲ್ಲಿ ಕೇಳಿಸಿಕೊಂಡದ್ದು ಸುಖೋಯ್ ವಿಮಾನದ ಸೋನಿಕ್ ಬೂಮ್. ಫೈಟರ್ ವಿಮಾನ 1,230 ಕಿ.ಮೀ ವೇಗ ತಲುಪಿ ಹೀಗೆ ಆಗಿತ್ತು ಎಂದು ತಿಳಿಸಿದ್ದಾರೆ.
ಹಾಗೇ ಜನಪ್ರಿಯ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಅವರು, ನೀವು ಕೇಳಿದ್ದು, ಸೂಪರ್ ಸೋನಿಕ್ ವಿಮಾನಗಳ ಪರೀಕ್ಷಾರ್ಥ ಹಾರಾಟದ ಸದ್ದು. ಗುಡುಗುಗಿಂತಲೂ ತೀವ್ರ ಎಂದು ಸ್ಟೇಟಸ್ ಅಪ್ ಡೇಟ್ ಮಾಡಿದ್ದಾರೆ.
ಇಂದು ಮಧ್ಯಾಹ್ನ ಈ ಶಬ್ಧ ಕೇಳುತ್ತಿದ್ದಂತೆ ಜನರು ಆತಂಕಗೊಂಡು ಮನೆಯಿಂದ ಆಚೆ ಬಂದಿದ್ದರು. ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಎಚ್‌ಎಎಲ್, ಇಸ್ರೋ ಲೇಔಟ್, ವಸಂತಪುರ, ಬನಶಂಕರಿ, ಸೇರಿದಂತೆ ಹಲವೆಡೆ ಈ ಶಬ್ಧ ಕೇಳಿಬಂದಿತ್ತು.
ಸೂಪರ್ ಸೋನಿಕ್ ಬೂಮ್ ಎಂದರೇನು?
ನಾವು ಸೂಪರ್ ಸೋನಿಕ್ ಬೂಮ್ ಬಗ್ಗೆ ತಿಳಿದುಕೊಳ್ಳುವ ಮೊದಲು ಮ್ಯಾಕ್ ಬಗ್ಗೆ ತಿಳಿದುಕೊಳ್ಳಬೇಕು. ಮ್ಯಾಕ್ ಎಂದರೇ “ಸಮುದ್ರ ಮಟ್ಟದಲ್ಲಿ ಶಬ್ದಗಳ ತರಂಗಗಳ ವೇಗ ಸುಮಾರು ಗಂಟೆಗೆ 1,235 ಕಿಮೀ ಇರುತ್ತದೆ. ಮೇಲೆ ಮೇಲೆ ಹಾರುತ್ತಾ ಏರಿದಾಗ ಈ ವೇಗ ಕಡಿಮೆಯಾಗುತ್ತಾ ಹೋಗುತ್ತದೆ. ಈ ವೇಗವನ್ನು ಒಂದು ಮ್ಯಾಕ್ ಎನ್ನುತ್ತಾರೆ.
“ನಮ್ಮ ಫೈಟರ್ ವಿಮಾನಗಳು ಈ ವೇಗದ ಆಸುಪಾಸಿನಲ್ಲಿ ಹಾರಾಡುತ್ತಿರುವಾಗ ಗಾಳಿಯ ಹಲವಾರು ಪದರಗಳು ಒಂದರ ಮೇಲೆ ಒಂದರಂತೆ ಏರುತ್ತಾ ಹೋಗುತ್ತವೆ. ಈ ವೇಳೆ ವಿಮಾನದ ವೇಗ ಒಂದು ಮ್ಯಾಕ್ ಗಿಂತಾ ಹೆಚ್ಚಾದಾಗ ಈ ವಾಯು ಪದರಗಳನ್ನು ಸೀಳಿಕೊಂಡು ಮುನ್ನುಗ್ಗುತ್ತವೆ. ಆಗ ಉಂಟಾಗುವ ಶಬ್ದವೇ ಸೂಪರ್ ಸೋನಿಕ್ ಬೂಮ್ ಎನ್ನುತ್ತಾರೆ.








