ಬೆಂಗಳೂರು: ಇಡೀ ರಾಜ್ಯವನ್ನೇ ನಡುಗಿಸಿರುವ ಕೆಪಿಎಸ್ ಸಿ ನೇಮಕಾತಿ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಈಗ ದೊಡ್ಡ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರು ಸಿಐಡಿ ತನಿಖಾಧಿಕಾರಿಗಳ ಮುಂದೆ ಬಾಯಿಬಿಟ್ಟಿದ್ದು, ಹಗರಣದ ಆಳ ಮತ್ತು ಅಗಲವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಸ್ಫೋಟಕ ತಪ್ಪೊಪ್ಪಿಗೆಯಿಂದಾಗಿ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತಷ್ಟು ಪ್ರಭಾವಿಗಳಿಗೆ ನಡುಕ ಶುರುವಾಗಿದೆ.
ಎಲ್ಲದಕ್ಕೂ ಕನ್ನಾಳೆಯೇ ಮಾಸ್ಟರ್ ಮೈಂಡ್
ಸಿಐಡಿ ಅಧಿಕಾರಿಗಳ ಸುದೀರ್ಘ ವಿಚಾರಣೆ ಎದುರಿಸಿದ ಜ್ಞಾನೇಂದ್ರ ಕುಮಾರ್, ಈ ಹಗರಣದಲ್ಲಿ ತಮ್ಮ ನೇರ ಪಾತ್ರಕ್ಕಿಂತ ಮಧ್ಯವರ್ತಿ ಬಸವರಾಜ್ ಕನ್ನಾಳೆಯ ಪಾತ್ರವೇ ದೊಡ್ಡದಿದೆ ಎಂದು ಹೇಳಿದ್ದಾರೆ. ಎಲ್ಲಾ ಅಕ್ರಮಗಳಿಗೂ ಕನ್ನಾಳೆಯೇ ಮುಖ್ಯ ರೂವಾರಿ. ನಾನು ಯಾವುದೇ ಅಭ್ಯರ್ಥಿಗಳ ಜೊತೆ ನೇರ ಸಂಪರ್ಕ ಹೊಂದಿರಲಿಲ್ಲ ಅಥವಾ ಹಣಕಾಸಿನ ವ್ಯವಹಾರ ನಡೆಸಿಲ್ಲ. ಬಸವರಾಜ್ ಕನ್ನಾಳೆ ನೀಡುತ್ತಿದ್ದ ಸೂಚನೆಗಳನ್ನಷ್ಟೇ ನಾನು ಪಾಲಿಸುತ್ತಿದ್ದೆ ಎಂದು ಜ್ಞಾನೇಂದ್ರ ಹಳಿದಿದ್ದಾರೆ ಎನ್ನಲಾಗಿದೆ.
ಪ್ರಿಂಟಿಂಗ್ ಗೂ ಮುನ್ನವೇ ಶೇ 60 ರಷ್ಟು ಪ್ರಶ್ನೆಗಳು ಲೀಕ್
ವಿಚಾರಣೆ ವೇಳೆ ಜ್ಞಾನೇಂದ್ರ ಕುಮಾರ್ ನೀಡಿದ ಮತ್ತೊಂದು ಮಾಹಿತಿ ಇಡೀ ವ್ಯವಸ್ಥೆಯನ್ನೇ ಬೆಚ್ಚಿಬೀಳಿಸುವಂತಿದೆ. ಪ್ರಶ್ನೆ ಪತ್ರಿಕೆಗಳು ಮುದ್ರಣವಾಗುವ ಮೊದಲೇ ಅವು ಸೋರಿಕೆಯಾಗಿದ್ದವು ಎಂಬ ಸತ್ಯವನ್ನು ಅವರು ಒಪ್ಪಿಕೊಂಡಿದ್ದಾರೆ. ಪ್ರಶ್ನೆ ಪತ್ರಿಕೆ ಪ್ರಿಂಟ್ ಆಗುವುದಕ್ಕೆ ಮೊದಲೇ ಸುಮಾರು ಶೇ 60 ರಷ್ಟು ಪ್ರಶ್ನೆಗಳನ್ನು ಮೊದಲೇ ಬರೆದುಕೊಳ್ಳಲಾಗಿತ್ತು. ನಾವು ಮೊದಲೇ ಸಿದ್ಧಪಡಿಸಿದ್ದ ಅಥವಾ ಬರೆದುಕೊಂಡಿದ್ದ ಪ್ರಶ್ನೆಗಳ ಸರಣಿಯನ್ನೇ ಅಂತಿಮವಾಗಿ ಮುದ್ರಿಸಲು ಸೂಚನೆ ನೀಡಲಾಗಿತ್ತು. ಇದಕ್ಕೆ ನಾನು ಅಧಿಕೃತವಾಗಿ ಅನುಮೋದನೆ ನೀಡಿದ್ದೆ ಎಂದು ಅವರು ಸಿಐಡಿ ಮುಂದೆ ಬಾಯ್ಬಿಟ್ಟಿದ್ದಾರೆ.
ಮತ್ತಷ್ಟು ಪ್ರಭಾವಿಗಳ ಮುಖವಾಡ ಕಳಚುವ ಸಾಧ್ಯತೆ
ಐಎಎಸ್ ಅಧಿಕಾರಿಯ ಈ ತಪ್ಪೊಪ್ಪಿಗೆಯಿಂದಾಗಿ ಕೆಪಿಎಸ್ ಸಿ ಹಗರಣ ಕೇವಲ ಒಬ್ಬಿಬ್ಬರಿಗೆ ಸೀಮಿತವಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಪರೀಕ್ಷಾ ವ್ಯವಸ್ಥೆಯ ಪ್ರತಿ ಹಂತದಲ್ಲೂ ಅಕ್ರಮ ಎಸಗಿರುವುದು ಸಾಬೀತಾಗುತ್ತಿದೆ. ಜ್ಞಾನೇಂದ್ರ ಕುಮಾರ್ ನೀಡಿರುವ ಮಾಹಿತಿಯನ್ನಾಧರಿಸಿ ಸಿಐಡಿ ಅಧಿಕಾರಿಗಳು ಈಗ ಹಗರಣದ ಹಿಂದೆ ಅಡಗಿರುವ ಮತ್ತಷ್ಟು ದೊಡ್ಡ ತಿಮಿಂಗಿಲಗಳ ಬೇಟೆ ಆರಂಭಿಸಿದ್ದಾರೆ.








