ಬೆಂಗಳೂರು : ರೈತ ಮಹಿಳೆಯನ್ನು ರಾಸ್ಕಲ್ ಎಂದ ಸಚಿವ ಮಾಧುಸ್ವಾಮಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ರೈತ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಸಚಿವ ಮಾಧುಸ್ವಾಮಿಯವರನ್ನ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ.. ಅಹವಾಲು ಸಲ್ಲಿಸಲು ಬಂದಿದ್ದ ಅನ್ಯಾಯಕ್ಕೊಳಗಾಗಿರುವ ರೈತ ಮಹಿಳೆಯನ್ನು ನಿಂದಿಸಿದ ಸಚಿವ ಮಾಧುಸ್ವಾಮಿಯವರ ದುರ್ವರ್ತನೆ ಅಕ್ಷಮ್ಯ. ಸಿಎಂ ಬಿಎಸ್ ಯಡಿಯೂರಪ್ಪ ಅವರು ತಕ್ಷಣ ಸಚಿವರು, ಆ ರೈತ ಮಹಿಳೆಯ ಕ್ಷಮೆ ಯಾಚಿಸುವಂತೆ ಮಾಡಿ, ಅವರನ್ನು ಸಂಪುಟದಿಂದ ಕೈ ಬಿಟ್ಟು ಸರ್ಕಾರದ ಮಾನ ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಿನ್ನೆ ಕೆ.ಸಿ ವ್ಯಾಲಿ ನೀರು ಕೋಲಾರದ ಎಸ್.ಅಗ್ರಹಾರ ಕೆರೆಗೆ ಬರುತ್ತಿರುವುದನ್ನು ವೀಕ್ಷಣೆ ಮಾಡಲು ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಬಂದಿದ್ದರು. ಈ ವೇಳೆ ಸಚಿವ ಮಾಧುಸ್ವಾಮಿ ಅವರ ಬಳಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷೆ ನಳಿನಿ ಅವರು ಕೆರೆ ಒತ್ತುವರಿ ತೆರವು ಕುರಿತು ಕೆಲವು ಪ್ರಶ್ನೆ ಇಟ್ಟರು. ಕೆರೆಕಟ್ಟೆ ಒಡೆಯದಂತೆ ಸಚಿವರಿಗೆ ಮನವಿ ಪತ್ರ ಕೊಡಲು ಮುಂದಾದರು. ಈ ವೇಳೆ ಸಚಿವ ಮಾಧುಸ್ವಾಮಿ ಏಕಾಏಕಿ ಅವರ ಮೇಲೆ ಸಿಟ್ಟಾದರು.
ಅಲ್ಲದೆ “ನೀನು ರಿಕ್ವೆಸ್ಟ್ ಮಾಡಿಕೋ, ಕಮಾಂಡ್ ಮಾಡಬೇಡ” ಎಂದು ಮಾಧುಸ್ವಾಮಿ ಗದರಿದ್ದಾರೆ. “ಒತ್ತುವರಿ ತೆರವು ಬಗ್ಗೆ ನನಗೇಕೆ ಕೇಳ್ತಿಯ? ನಾನು ಬೇರೆಯವರ ತರ ಅಲ್ಲ, ನಾನು ಭಾರಿ ಕೆಟ್ಟ ಮನುಷ್ಯ ಇದ್ದೀನಿ, ಬಾಯಿ ಮುಚ್ಚು ರಾಸ್ಕಲ್” ಎಂದು ಸಿಡಿಮಿಡಿಗೊಂಡಿದ್ದಾರೆ. ಈ ವೇಳೆ ರೈತ ಸಂಘದ ಮಹಿಳೆಯರು ಹಾಗೂ ಸಚಿವರ ನಡುವೆ ವಾಗ್ವಾದ ನಡೆಯಿತು.








