ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ನಟ ದರ್ಶನ್ ಅವರು ಇದೀಗ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೋಷ್ರನ್ನು ಮಾಫಿ ಸಾಕ್ಷಿ (Approver) ಯನ್ನಾಗಿ ಪರಿಗಣಿಸುವ ಕುರಿತು ಬೆಂಗಳೂರಿನ 59ನೇ CCH ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶವನ್ನು ಪ್ರಶ್ನಿಸಿ ದರ್ಶನ್ ಅವರು ಹೈಕೋರ್ಟ್ನಲ್ಲಿ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ.
ಇತ್ತೀಚೆಗೆ ಪ್ರದೋಷ್ ಅವರು ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಸಿದ್ಧರಿರುವುದಾಗಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಶೀಲಿಸಿದ 59ನೇ CCH ನ್ಯಾಯಾಲಯವು ಅವರ ಮನವಿಯನ್ನು ಮಾನ್ಯ ಮಾಡಿತ್ತು.
ಆದರೆ, ಪ್ರದೋಷ್ರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವುದನ್ನು ವಿರೋಧಿಸಿ ತಮ್ಮ ವಾದ ಮಂಡಿಸಲು ದರ್ಶನ್ ಪರ ವಕೀಲರು ಕೋರಿದ್ದ ಅವಕಾಶವನ್ನು ವಿಚಾರಣಾ ನ್ಯಾಯಾಲಯ ನಿರಾಕರಿಸಿತ್ತು ಎನ್ನಲಾಗಿದೆ.
ಇದೇ ಅಂಶವನ್ನು ಪ್ರಶ್ನಿಸಿರುವ ದರ್ಶನ್, ತಮ್ಮ ವಾದ ಮಂಡಿಸಲು ಅವಕಾಶ ನೀಡದೆ ವಿಚಾರಣಾ ನ್ಯಾಯಾಲಯ ಆದೇಶಿಸಿರುವುದು ಸರಿಯಲ್ಲ ಎಂದು ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.








