ಅತಿಯಾದ ಮೊಬೈಲ್ ಬಳಕೆ ಹಾಗೂ ಗಂಟೆಗಟ್ಟಲೆ ಗೇಮ್ಸ್ ಮತ್ತು ವಿಡಿಯೋ ವೀಕ್ಷಿಸುವ ಅಭ್ಯಾಸದಿಂದ ತೀವ್ರ ಕುತ್ತಿಗೆ ನೋವಿಗೆ ಒಳಗಾಗಿದ್ದು, ಇತ್ತೀಚೆಗೆ ₹3 ಲಕ್ಷ ವೆಚ್ಚದಲ್ಲಿ ಪ್ರಮುಖ ಕುತ್ತಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ ಎಂದು ಹಿರಿಯ ನಟಿ ಶಕೀಲಾ ತಿಳಿಸಿದ್ದಾರೆ.
ಆಸ್ಪತ್ರೆಯಿಂದ ಚೇತರಿಸಿಕೊಂಡು ಮನೆಗೆ ಮರಳಿದ ಬಳಿಕ ಅವರು ನೆಕ್ ಕಾಲರ್ ಧರಿಸಿರುವ ವಿಡಿಯೋ ಹಂಚಿಕೊಂಡು ತಮ್ಮ ಆರೋಗ್ಯ ಸಮಸ್ಯೆಯ ಕುರಿತು ಮಾತನಾಡಿದ್ದಾರೆ.
ಯೂಟ್ಯೂಬ್, ಇನ್‌ಸ್ಟಾಗ್ರಾಂ ರೀಲ್ಸ್ ನೋಡುವುದು ಹಾಗೂ ನಿರಂತರವಾಗಿ ಹಲವು ಗಂಟೆಗಳ ಕಾಲ ಮೊಬೈಲ್‌ನಲ್ಲಿ ಗೇಮ್ಸ್ ಆಡುವುದು ತಮ್ಮ ಅಭ್ಯಾಸವಾಗಿತ್ತು ಎಂದು ಶಕೀಲಾ ಹೇಳಿದ್ದಾರೆ. ಕೆಲವೊಮ್ಮೆ ಒಂದೇ ಪಕ್ಕಕ್ಕೆ ಮಲಗಿ ಗಂಟೆಗಟ್ಟಲೆ ಮೊಬೈಲ್ ಬಳಸುತ್ತಿದ್ದೆ ಎಂದು ಅವರು ತಿಳಿಸಿದ್ದಾರೆ.
ತಪ್ಪಾದ ಭಂಗಿಯಲ್ಲಿ ದೀರ್ಘಕಾಲ ಮೊಬೈಲ್ ಬಳಸಿದ ಪರಿಣಾಮ ಕುತ್ತಿಗೆಯಲ್ಲಿ ಗಂಭೀರ ಸಮಸ್ಯೆ ಉಂಟಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಯಿತು ಎಂದು ಅವರು ವಿವರಿಸಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ದೈನಂದಿನ ಕೆಲಸಗಳಿಗೂ ಇತರರ ಸಹಾಯ ಬೇಕಾಗಿದೆ ಎಂದು ಹೇಳಿದ್ದಾರೆ.
‘ಮೊಬೈಲ್ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಬಳಸಿ’
ಮೊಬೈಲ್ ಉಪಯುಕ್ತ ಸಾಧನವಾದರೂ ಅದನ್ನು ಮಿತವಾಗಿ ಬಳಸಬೇಕು ಎಂದು ಶಕೀಲಾ ಸಲಹೆ ನೀಡಿದ್ದಾರೆ.
ಅನಗತ್ಯ ವಿಡಿಯೋಗಳನ್ನು ನೋಡಿ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ. ಇಲ್ಲದಿದ್ದರೆ ಹಣ ಕಳೆದುಕೊಳ್ಳುವುದರ ಜೊತೆಗೆ ಅಸಹನೀಯ ನೋವನ್ನು ಅನುಭವಿಸಬೇಕಾಗಬಹುದು. ಮಕ್ಕಳಿಗೆ ಗ್ಯಾಜೆಟ್‌ಗಳನ್ನು ನೀಡುವಾಗ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದ್ದಾರೆ.
ದಕ್ಷಿಣ ಭಾರತದ ಜನಪ್ರಿಯ ನಟಿ
1990ರ ದಶಕದಲ್ಲಿ ನಟನಾ ವೃತ್ತಿ ಆರಂಭಿಸಿದ ಶಕೀಲಾ, 2000ರಲ್ಲಿ ಬಿಡುಗಡೆಯಾದ ‘ಕಿನ್ನರತುಂಬಿಕಲ್’ ಚಿತ್ರದ ಮೂಲಕ ದಕ್ಷಿಣ ಭಾರತದಲ್ಲಿ ಜನಪ್ರಿಯತೆ ಗಳಿಸಿದ್ದರು.ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಅವರು, ‘ಪ್ಲೇಬಾಯ್’, ‘ಚೋಟ್ಟಾ ಮುಂಬೈ’, ‘ಅಳಗಿಯ ತಮಿಳ್ ಮಗನ್’, ‘ಜಯಂ’ ಮತ್ತು ‘ಮೊನಾಲಿಸಾ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.








