ನಮ್ಮ ಬೆಂಗಳೂರನ್ನು 3 ಶತಮಾನಗಳ ಹಿಂದೆ ಒಬ್ಬ ರಾಜ ಇನ್ನೊಬ್ಬ ರಾಜನಿಗೆ ಸೇಲ್ ಮಾಡಿದ್ದ ವಿಷಯ ನಿಮಗೆ ಗೊತ್ತಾ? ಹೌದು ಇದು ನೀವು ನಂಬಲೇಬೇಕಾದ ಚಾರಿತ್ರಿಕ ಸತ್ಯ. ಕೆಂಪೇಗೌಡರ ಕಾಲದ ನಂತರ ಬೆಂಗಳೂರನ್ನು ಮೈಸೂರು ಅರಸರು ಹರಾಜಿನಲ್ಲಿ ಖರೀದಿಸಿದ್ದರು. ಬೆಂಗಳೂರನ್ನು ಹರಾಜು ಹಾಕಿದ್ದ ರಾಜ ಯಾರು? ಹರಾಜಿನಲ್ಲಿ ಪಡೆದುಕೊಂಡ ಮೈಸೂರಿನ ಅರಸರು ಯಾರು? ನಮಗೆ ಗೊತ್ತಿಲ್ಲದ ಈ ಇತಿಹಾಸದ ಹಿನ್ನೆಲೆ ಏನು ಗೊತ್ತಾ? ಓದಿ ನೋಡಿ.
ಬೆಂಗಳೂರಿಗೆ ಸುದೀರ್ಘವಾದ ಇತಿಹಾಸವಿದೆ. ಈ ಹಿಂದೆ ನಮ್ಮ ಬೆಂಗಳೂರಿಗೆ ಹಲವು ಹೆಸರುಗಳಿದ್ದವು. ಕೆಂಪೇಗೌಡರಿಗಿಂತ ಪೂರ್ವದಲ್ಲಿ ಹಾಗೂ ಕೆಂಪೇಗೌಡರ ನಂತರದಲ್ಲಿ ಬೆಂಗಳೂರನ್ನು ಆಳಿದವರಿದ್ದಾರೆ. ಆದ್ರೆ ಚರಿತ್ರೆಯ ನೆನಪಿನಲ್ಲಿ ಶಾಶ್ವತವಾಗಿ ಉಳಿದಿದ್ದು ಮಾತ್ರ ವಿಜಯನಗರ ಸಾಮ್ರಾಜ್ಯದ ಸಾಮಂತರಾದ ಯಲಹಂಕ ಸಂಸ್ಥಾನದ ನಾಡಪ್ರಭು ಕೆಂಪೇಗೌಡರು ಮಾತ್ರ.
ಕೋಟಿ ಜನಸಂಖ್ಯೆ ದಾಟಿರುವ ಮಹಾನಗರಿ ಬೆಂಗಳೂರು ಉದ್ಯಾನ ನಗರಿ ಪಿಂಚಣಿದಾರರ ಸ್ವರ್ಗ ಎನ್ನುತ್ತಿದ್ದ ಕಾಲದಿಂದ ಐಟಿ ಉದ್ಯಮದ ರಾಜಧಾನಿ, ಕಾಸ್ಮೋ ನಗರಿ, ಭಾರತೀಯ ಸಿಲಿಕಾನ್ ವ್ಯಾಲಿ, ಫ್ಯಾಷನ್ ಸಿಟಿ, ಡೈನಾಮಿಕ್ ಸಿಟಿ ಹಾಗೂ ಏಷ್ಯಾದ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಿ ಅನ್ನುವ ವರೆಗೆ ತೀವ್ರತಮ ಅಭಿವೃದ್ಧಿ ಕಂಡು ಹಲವು ಹೆಗ್ಗಳಿಕೆಗಳನ್ನು ಪಡೆದಿದೆ. ಕೆಲವು ಇತಿಹಾಸಕಾರರ ಪ್ರಕಾರ ನಮ್ಮ ಬೆಂಗಳೂರಿಗೆ ಸುಮಾರು 1000 ವರ್ಷಗಳ ಸುದೀರ್ಘ ಇತಿಹಾಸವಿದೆ. ಪ್ರಾಚೀನ ಶಾಸನಗಳ ಅನ್ವಯ 1537ಕ್ಕೂ ಪೂರ್ವದಲ್ಲಿ ಗಂಗಾವಡಿ ಆಳ್ವಿಕೆಯ ಕಾಲದಲ್ಲಿ ನಮ್ಮ ಬೆಂಗಳೂರನ್ನು ಬೆಂಗಾವಲೂರು ಅಂತ ಕರೆಯುತ್ತಿದ್ದರು. ಹೊಯ್ಸಳ ದೊರೆ ವೀರ ಬಲ್ಲಾಳನ ಕಾಲದಲ್ಲಿ ಇದಕ್ಕೆ ಬೆಂದಕಾಳೂರು ಅನ್ನುವ ಹೆಸರು ಬಂದಿತು. ಅತ್ಯಂತ ಪ್ರಾಚೀನ ಉಲ್ಲೇಖವಾಗಿ ದೊರೆತಿರುವ ಬೇಗೂರಿನ ಶಾಸನದಲ್ಲಿ ’ಬೆಂಗಳೂರು’ ಹೆಸರು ಸ್ಪಷ್ಟವಾಗಿದೆ. ಬೆಂದಕಾಳು ಊರು, ಬೆಂದಕಾಡು ಊರು, ಬೆಂಗಾಡು ಊರು, ಬೆಣಚುಕಲ್ಲು ಊರು ಬೆಂಗಳೂರಿಗೆ ಹಿಂದೆ ಇದ್ದಿರಬಹುದಾದ ಹೆಸರುಗಳು ಅನ್ನುವ ಅಂದಾಜಷ್ಟೆ.
ಕ್ರಿ.ಶ 1537ರ ತನಕ ನಮ್ಮ ಬೆಂಗಳೂರು ದಕ್ಷಿಣ ಭಾರತದ ಪ್ರಮುಖ ಸಂಸ್ಥಾನಗಳಾಗಿದ್ದ ಗಂಗರು, ಚೋಳರು ಮತ್ತು ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿತ್ತು. ಆ ಬಳಿಕ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಯಲಹಂಕ ನಾಡಿನ ಅರಸ ಕೆಂಪೇಗೌಡರು ಬೆಂಗಳೂರನ್ನು ಗುರುತಿಸಿ ಇದಕ್ಕೆ ಗಂಡು ನೆಲ ಅನ್ನುವ ಬಿರುದನ್ನಿಟ್ಟು ಮಣ್ಣಿನ ಕೋಟೆ ಕಟ್ಟಿ ಆಧುನಿಕ ಬೆಂಗಳೂರಿನ ಉದಯಕ್ಕೆ ಕಾರಣಕರ್ತರಾದರು. ಬೆಂಗಳೂರನ್ನು 1537ರಲ್ಲಿ ಕೆಂಪೇಗೌಡರ ತಮ್ಮ ರಾಜಧಾನಿಯನ್ನಾಗಿಸಿಕೊಂಡ್ರು. 1510ರಿಂದ 1590ರ ವರೆಗೆ ಆಳಿದ ಹಿರಿಯ ಕೆಂಪೇಗೌಡರು ಈ ನಗರಕ್ಕೆ ಗಂಡು ಭೂಮಿ ಹಾಗೂ ನಾಯಕರ ರಾಜ್ಯ ಅನ್ನುವ ಹೆಸರಿಟ್ಟಿದ್ದರು. ಕೆಂಪೇಗೌಡರ ಮೊಮ್ಮಗ ಇಮ್ಮಡಿ ಕೆಂಪೇಗೌಡರ ಮಗ ಮುಮ್ಮಡಿ ಕೆಂಪೇಗೌಡರ ಕಾಲದಲ್ಲಿ ನಡೆದ ಕದನ ಬೆಂಗಳೂರು ಕೆಂಪೇಗೌಡರ ವಂಶಸ್ಥರ ಕೈ ತಪ್ಪುವಂತೆ ಮಾಡಿತು. ಬಿಜಾಪುರದ ಆದಿಲ್ ಶಾಹಿಯ ಜಾಗಿರು ಶಹಾಜಿ ಬೋನ್ಸ್ಲೇ (ಛತ್ರಪತಿ ಶಿವಾಜಿಯ ತಂದೆ) ಹಾಗೂ ರಣದುಲ್ಲಾ ಖಾನ್ ಬೆಂಗಳೂರಿನ ಮೇಲೆ ದಂಡೆತ್ತಿ ಬಂದಿದ್ದರು. ಯುದ್ಧದಲ್ಲಿ ಸೋತು ಸಂದಿ ಮಾಡಿಕೊಂಡ ಮುಮ್ಮಡಿ ಕೆಂಪೇಗೌಡರು ಬೆಂಗಳೂರನ್ನು ಶಹಾಜಿ ಸುಪರ್ಧಿಗೊಪ್ಪಿಸಿ ಮಾಗಡಿಗೆ ತೆರಳಿದ್ರು.
ಕೆಂಪೇಗೌಡರ ವಂಶದ ಕಾಲದ ನಂತರ ಮರಾಠರು ಮತ್ತು ಮುಘಲರ ಅಲ್ಪಾವಧಿ ಆಡಳಿತಕ್ಕೆ ಬೆಂಗಳೂರು ಒಳಪಟ್ಟಿತ್ತು. ಮತ್ತು ಇದೇ ಅವಧಿಯಲ್ಲೇ ಬೆಂಗಳೂರನ್ನು ಹರಾಜಿನ ಮೂಲಕ ಮಾರಾಟ ಮಾಡಿದ್ದ ಘಟನೆ ಜರುಗಿದ್ದು. ಬೆಂಗಳೂರು ನಗರ ಮೈಸೂರು ರಾಜರ ಆಧಿಪತ್ಯಕ್ಕೆ ಬಂದ ನಂತರ ಚಿಕ್ಕದೇವರಾಜ ಒಡೆಯರ್, ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಆಡಳಿತಕ್ಕೂ ಬೆಂಗಳೂರು ಸೇರಿತ್ತು. 1799ರಲ್ಲಿ ನಡೆದ ನಾಲ್ಕನೇ ಆಂಗ್ಲೋ ಮೈಸೂರು ಕದನದಲ್ಲಿ ಇದು ಬ್ರಿಟೀಷರ ಪಾಲಾಯಿತು. ಅದಾದ ಬಳಿಕ ಬ್ರಿಟೀಷರು ಮೈಸೂರು ಸಂಸ್ಥಾನವನ್ನು ತಮ್ಮ ಆಡಳಿತದ ಒಂದು ರಾಜ್ಯವನ್ನಾಗಿಸಿ, ಬೆಂಗಳೂರನ್ನು ಅದರ ರಾಜಧಾನಿಯಾಗಿ ಘೋಷಿಸಿದ್ರು. ಹೀಗಾಗಿ ಬೆಂಗಳೂರು ಮತ್ತೆ ಮೈಸೂರು ಒಡೆಯರರ ತೆಕ್ಕೆಗೆ ಬಂದಿತು.
ಹಿರಿಯ ಕೆಂಪೇಗೌಡರ ನಂತರ ಅವರ ಮಗ ಇಮ್ಮಡಿ ಕೆಂಪೇಗೌಡರು ಬೆಂಗಳೂರಿನ ಸುತ್ತಮುತ್ತ ಪ್ರಮುಖವಾದ ನಾಲ್ಕು ಗೋಪುರಗಳನ್ನು ನಿರ್ಮಿಸಿ ಬೆಂಗಳೂರಿನ ಗಡಿ ಗುರುತಿಸಿದ್ದರು. ಲಾಲಭಾಗ್, ಕೆಂಪಾಂಬುಧಿ ಕೆರೆ, ಅಲಸೂರು ಕೆರೆ, ಮೇಖ್ರಿ ವೃತ್ತದ ಬಳಿ ಗೋಪುರಗಳನ್ನು ನಿರ್ಮಿಸಿದ್ದರು. ಚರಿತ್ರೆಯ ಭವ್ಯ ಕುರುಹಾದ ಆ ಗೋಪುರಗಳು ಇಂದಿಗೂ ಉಳಿದಿವೆ. ಇದಲ್ಲದೇ ನಗರದಾದ್ಯಂತ ಹತ್ತಾರು ದೇವಸ್ಥಾನಗಳನ್ನು ಕೆರೆ ಕಟ್ಟೆಗಳನ್ನು, ಸರೋವರಗಳನ್ನು, ಸುಂದರ ಕಟ್ಟಡಗಳನ್ನು, ಪೇಟೆಗಳನ್ನು, ರಸ್ತೆಗಳನ್ನು ನೀರು ಗಾಲುವೆಗಳನ್ನು ನಿರ್ಮಿಸಿ ಬೆಂಗಳೂರಿನ ನಗರ ಸೌಂದರ್ಯವನ್ನು ಇಮ್ಮಡಿಗೊಳಿಸಿದರು. ಬೆಂಗಳೂರು ಅಚ್ಚುಕಟ್ಟಾದ ಹಾಗೂ ಸುವ್ಯವಸ್ಥಿತ ನಗರವಾಗುವ ಹಿಂದೆ ಹಿರಿಯ ಕೆಂಪೇಗೌಡರು ಹಾಗೂ ಇಮ್ಮಡಿ ಕೆಂಪೇಗೌಡರ ಶ್ರಮ ಹಾಗೂ ದೂರದೃಷ್ಟಿ ಇತ್ತು.
ಬೆಂಗಳೂರಿನ ವಿಸ್ಕೃತ ಇತಿಹಾಸ ನೋಡುವುದಾದ್ರೆ ಕ್ರಿ.ಶ 1501ರಲ್ಲಿ ಮಲ್ಲಭೈರೇಗೌಡನಿಂದ ಸ್ಥಾಪನೆಯಾದ ದೇವನಹಳ್ಳಿ ಕೋಟೆ, ಆ ಬಳಿಕ 1749ರಲ್ಲಿ ಮೈಸೂರಿನ ದಳವಾಯಿ ನಂಜರಾಜಯ್ಯ ಈ ಕೋಟೆಯನ್ನು ವಶಪಡಿಸಿಕೊಂಡ ಅನ್ನುವ ಐತಿಹಾಸಿಕ ಪುರಾವೆಗಳಿವೆ. ಕೆಲವು ಕಾಲದ ನಂತರ ಈ ದೇವನಹಳ್ಳಿ ಕೋಟೆಯನ್ನು ಹೈದರಾಲಿ ಹಾಗೂ ಟಿಪ್ಪು ಸುಲ್ತಾನನ ಗೆದ್ದುಕೊಂಡರು. 1971ರ ಆಂಗ್ಲೋ ಮೈಸೂರು ಯುದ್ಧದ ಸಂದರ್ಭದಲ್ಲಿ ಲಾರ್ಡ್ ಕಾರ್ನ್ ವಾಲೀಸ್ ದೇವನಹಳ್ಳಿಯನ್ನು ವಶಪಡಿಸಿಕೊಂಡ. ಮೈಸೂರು ಹುಲಿ ಎಂದು ಇತಿಹಾಸದಲ್ಲಿ ಪ್ರಖ್ಯಾತವಾಗಿರುವ ಟಿಪ್ಪು ಸುಲ್ತಾನ್ ಜನ್ಮಸ್ಥಳ ಇದೇ ದೇವನಹಳ್ಳಿ ಸಮೀಪವಿದೆ.
ಇನ್ನೊಂದು ಚಾರಿತ್ರಿಕ ಪುರಾವೆಗಳ ಪ್ರಕಾರ 15ನೇ ಶತಮಾನದ ಅವಧಿಯಲ್ಲಿ ತಮಿಳುನಾಡಿನ ಕಾಂಜೀವರಂನಿಂದ ಪಲಾಯನಗೊಂಡ ಬಂದ ನಿರಾಶ್ರಿತರ ಕುಟುಂಬಗಳು, ನಂದಿ ಬೆಟ್ಟದ ಪೂರ್ವದಲ್ಲಿರುವ ರಾಮಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಾಗರೀಕತೆ ಕಟ್ಟಿಕೊಳ್ಳುತ್ತಾರೆ. ಈ ಸಮುದಾಯದ ನಾಯಕ ರಣಭೈರೇಗೌಡ. ಅಂದಿನ ಅಹುತಿ ಈಗಿನ ಅವತಿ ಗ್ರಾಮದಲ್ಲಿ ಇವರ ಬದುಕು ಮತ್ತು ಅಧಿಪತ್ಯ ಪ್ರಾರಂಭವಾಗುತ್ತದೆ. ರಣಭೈರವನ ಕಾಲಾನಂತರ ಮಲ್ಲಭೈರೇಗೌಡ ಹಾಗೂ ಕೆಂಪೇಗೌಡರು ದೇವನಹಳ್ಳಿ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನ ಸ್ಥಾಪನೆಯನ್ನು ಮಾಡುತ್ತಾರೆ. ಇದು ಇತಿಹಾಸದ ಇನ್ನೊಂದು ಆಯಾಮ. ಚಾಮರಾಜಪೇಟೆಯಲ್ಲಿರುವ ಸಮ್ಮರ್ ಪ್ಯಾಲೇಸ್ 1781ರಲ್ಲಿ ನವಾಬ್ ಹೈದರ್ ಅಲಿ ಕಾಲದಲ್ಲಿ ಪ್ರಾರಂಭವಾಗಿ 1791ರಲ್ಲಿ ಟಿಪ್ಪು ಸುಲ್ತಾನ್‌ನ ಕಾಲದಲ್ಲಿ ಪೂರ್ಣಗೊಂಡಿತು.
ಬಿಜಾಪುರದ ಆದಿಲ್ ಶಾಹಿಗಳ ಸಹವರ್ತಿಯಾಗಿದ್ದ ಮರಾಠ ದೊರೆ ಶಹಾಜಿ ಬೋನ್ಸಲೇ ದಕ್ಷಿಣದಲ್ಲಿ ಅಧಿಪತ್ಯ ಸಾಧಿಸಿದ್ದ ಸಮಯದಲ್ಲೇ ಔರಂಗಜೇಬ ದಕ್ಷಿಣವನ್ನು ಶತಾಯಗತಾಯ ಆಕ್ರಮಿಸಿಕೊಳ್ಳಲು ಹಾತೊರೆಯುತ್ತಿದ್ದ. ಶಹಾಜಿಯ ಕಾಲದ ನಂತರ ಬೆಂಗಳೂರು ಪ್ರದೇಶ ಶಹಾಜಿಯ ಇನ್ನೊಬ್ಬ ಮಗ ಹಾಗೂ ಛತ್ರಪತಿ ಶಿವಾಜಿಯ ಮಲ ಸಹೋದರ ಎಕೋಜಿ ಅಥವಾ ವೆಂಕೋಜಿಯ ಹಿಡಿತಕ್ಕೆ ಬಂದಿತು. ಶಿವಾಜಿಯ ಜೊತೆ ಸಾಕಷ್ಟು ಕೌಟುಂಬಿಕ ಭಿನ್ನಾಭಿಪ್ರಾಯ ಹೊಂದಿದ್ದ ಎಕೋಜಿಯ ಕಾಲದಲ್ಲೇ ಬೆಂಗಳೂರಿನ ಮಾರಾಟದ ಪ್ರಹಸನ ನಡೆದಿದ್ದು.
ಬೆಂಗಳೂರು ನಿರ್ಮಾತೃ ಯಲಹಂಕ ನಾಡಪ್ರಭು ಹಿರಿಯ ಕೆಂಪೇಗೌಡ ಹಾಗೂ ಅವರ ಮಗ ಇಮ್ಮಡಿ ಕೆಂಪೇಗೌಡರು. ನಮಗೆಲ್ಲಾ ಗೊತ್ತಿರುವ ಚರಿತ್ರೆಯಿದು. ಆದ್ರೆ ಕೆಂಪೇಗೌಡರ ಕಾಲದ ನಂತರ ಬೆಂಗಳೂರು ಇನ್ನೊಬ್ಬ ರಾಜನ ಅಧೀನದಲ್ಲಿತ್ತು. ಆ ದೊರೆ ಬೆಂಗಳೂರನ್ನು ಹರಾಜಿನಲ್ಲಿಟ್ಟು ಮಾರಾಟ ಮಾಡಿದ್ದ ಅನ್ನೋ ಸಂಗತಿ ನಮ್ಮಲ್ಲಿ ಬಹುತೇಕರಿಗೆ ಗೊತ್ತಿಲ್ಲ. ಹೌದು! ಸುಮಾರು ಮೂರು ಶತಮಾನಗಳ ಹಿಂದೆ ಬೆಂಗಳೂರು ಮಾರಾಟದ ಘಟನೆ ಘಟಿಸಿತ್ತು ಅನ್ನೋದು ವಿಚಿತ್ರವಾದ್ರೂ ಸತ್ಯ.
17ನೇ ಶತಮಾನ ಅಂತ್ಯದಲ್ಲಿ ಬೆಂಗಳೂರು ಮಾರಾಟಕ್ಕಿತ್ತು. ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರಲ್ಲದೇ ಇದು ಇನ್ನೊಬ್ಬ ದೊರೆಯ ವಶದಲ್ಲಿತ್ತು. ಮತ್ತು ಆ ದೊರೆ ನಮ್ಮ ಬೆಂಗಳೂರನ್ನು ಮೈಸೂರು ಸಂಸ್ಥಾನದ ಒಡೆಯರ್ಗೆ ಸುಮಾರು 3 ಲಕ್ಷ ರೂಪಾಯಿ ಮೊತ್ತಕೆ ಮಾರಾಟ ಮಾಡಿದ್ದ. ಇವಿಷ್ಟು ನಮಗೆ ಗೊತ್ತಿಲ್ಲದ ಬೆಂಗಳೂರಿನ ಇತಿಹಾಸ.
ನಮಗೆ ಕೆಂಪೇಗೌಡರ ಕಾಲದ ನಂತರ ಬೆಂಗಳೂರಿನಲ್ಲಿ ಯುರೋಪಿಯನ್ನರು ನೆಲೆಯೂರುವ ಮಧ್ಯದ ಅವಧಿಯ ಬಹುತೇಕ ಇತಿಹಾಸ ಇಂದಿಗೂ ಗೊತ್ತಿಲ್ಲ. ಇಮ್ಮಡಿ ಹಾಗೂ ಮುಮ್ಮಡಿ ಕೆಂಪೇಗೌಡರ ಕಾಲದ ಇತಿಹಾಸದ ಹೆಜ್ಜೆಗುರುತುಗಳೂ ಗೊತ್ತಿಲ್ಲ. ಅದನ್ನು ಕೆದಕುವ ಕೆಲಸವನ್ನು ಅಲ್ಲಲ್ಲಿ ಕೆಲವು ಸಂಶೋಧಕರು ಮಾಡುತ್ತಿದ್ದಾರೆ. ಅಂತಹ ಒಬ್ಬ ಸಂಶೋಧಕ ಬಿ ಮುದ್ದಾಚಾರ್ಯ ಎನ್ನುವವರು ಬರೆದಿರುವ ದಿ ಮೈಸೂರ್ ಮೊಘಲ್ ರಿಲೇಷನ್ಸ್ (1686-87) ಎಂಬ ಪುಸ್ತಕದಲ್ಲಿ ಬೆಂಗಳೂರನ್ನು ಮಾರಾಟ ಮಾಡಿದ ಸಂಗತಿಗಳನ್ನು ಉಲ್ಲೇಖಿಸಲಾಗಿದೆ.
ಕ್ರಿ.ಶ1510ರಿಂದ ಕ್ರಿ.ಶ1569ರವರೆಗೆ ಯಲಹಂಕ ನಾಡಿನ ಪಾಳೇಗಾರರಾಗಿ ಆಳ್ವಿಕೆ ನಡೆಸಿದ ಹಿರಿಯ ಕೆಂಪೇಗೌಡರು ಅಥವಾ ಮೊದಲನೆಯ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದರು. ಹಿರಿಯ ಕೆಂಪೇಗೌಡರು ಸಾಕಷ್ಟು ವ್ಯವಸ್ಥಿತ ರೀತಿಯಿಂದ ನಿರ್ಮಿಸಿದ್ದ ಬೆಂಗಳೂರು ನಗರ ಆಗ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಕೆಂಪೇಗೌಡರ ಮಗ ಇಮ್ಮಡಿ ಕೆಂಪೇಗೌಡರೂ ಸಹ ಬೆಂಗಳೂರು ನಗರ ನಿರ್ಮಾಣದಲ್ಲಿ ಕೈ ಜೋಡಿಸಿದ್ದರು. ವಿಜಯ ನಗರ ಪತನದ ನಂತರ ಮಾಗಡಿ ಬಳಿಯ ಕೆಂಪಾಪುರದ ಬಳಿ ಯುದ್ಧದಲ್ಲಿ ಕೆಂಪೇಗೌಡರು ಮರಣ ಹೊಂದಿತ್ತಾರೆ ಎನ್ನುತ್ತವೆ ಚರಿತ್ರೆಯ ಮೂಲಗಳು. ಇನ್ನು ಅವರ ಮಗ ಇಮ್ಮಡಿ ಕೆಂಪೇಗೌಡರ ನಂತರ ಮುಮ್ಮಡಿ ಕೆಂಪೇಗೌಡರ ಕಾಲದಲ್ಲಿ ರಾಜಸಂಸ್ಥಾನ ಬೆಂಗಳೂರಿನಿಂದ ಮಾಗಡಿಗೆ ವರ್ಗಾವಣೆಗೊಂಡಿತು ಅನ್ನುತ್ತದೆ ಇತಿಹಾಸ.
ಕ್ರಿ.ಶ 1686, ಅದು ಮೊಘಲ್ ಸಾಮ್ರಾಜ್ಯ ಭವ್ಯ ಭಾರತವನ್ನು ಆಳುತ್ತಿದ್ದ ಕಾಲ. ಮೊಘಲರು ದಕ್ಷಿಣ ಭಾರತವನ್ನು ಆಕ್ರಮಿಸಿಕೊಳ್ಳಲು ಉತ್ಸುಕರಾಗಿದ್ದ ಕಾಲ. ಈ ವೇಳೆ ಮೊಘಲ್ ಸಾಮ್ರಾಟ ಔರಂಗಜೇಬ ಬಿಜಾಪುರ ಸಂಸ್ಥಾನವನ್ನು ಕೈವಶಪಡಿಸಿಕೊಂಡಿದ್ದ. ಡೆಕ್ಕನ್ ಪ್ರಾಂತ್ಯ ಆಗ ಮರಾಠ ದೊರೆಗಳ ವಶದಲ್ಲಿತ್ತು.
ಆ ಕಾಲಘಟ್ಟದಲ್ಲಿ ಮರಾಠರು ಹಾಗೂ ಮೊಘಲರನ್ನು ಅತಿಯಾಗಿ ಆಕರ್ಷಿಸಿದ್ದ ಪ್ರದೇಶ ಬೆಂಗಳೂರು. ಇಬ್ಬರೂ ರಾಜರು ಬೆಂಗಳೂರನ್ನು ಕೈವಶ ಮಾಡಿಕೊಂಡು ಪ್ರಾಬಲ್ಯ ಸಾಧಿಸಲು ಕಾತುರದಿಂದ ಕಾಯುತ್ತಿದ್ದರು. 1687ರಲ್ಲಿ ಆಗಿನ ಬೆಂಗಳೂರು ಮರಾಠ ಎಕೋಜಿಯ ವಶದಲ್ಲಿದ್ದ ಸಂದರ್ಭದಲ್ಲಿ ಮೊಘಲರ ಕಣ್ಣು ಬೆಂಗಳೂರಿನ ಮೇಲೆ ಸ್ಥಿರವಾಗಿ ನೆಟ್ಟಿತ್ತು. ಆಗ ಮಧ್ಯ ಪ್ರವೇಶಿಸಿ ಸಂಧಾನ ಮಾಡಿಸಿದ ವ್ಯಕ್ತಿ ಬೇರಾರು ಅಲ್ಲ, ಅವರೇ ಮೈಸೂರು ಸಂಸ್ಥಾನದ 14ನೆಯ ದೊರೆ ಚಿಕ್ಕದೇವರಾಜ ಒಡೆಯರ್.
ಬೆಂಗಳೂರನ್ನು ಆಕ್ರಮಿಸಿಕೊಂಡು ಮೆರೆಯಬೇಕೆಂದೂ ಮರಾಠರು ಹಾಗೂ ಮೊಘಲರು ಕಾಯುತ್ತಿದ್ದಾಗ ಮಧ್ಯ ಪ್ರವೇಶಿಸಿದವ ಚಿಕ್ಕದೇವರಾಜ ಒಡೆಯರ್ ಇದಕ್ಕೊಂದು ತಾರ್ಕಿಕ ಅಂತ್ಯ ಕಲ್ಪಿಸಿದರು. ಅಂದು ಅವರು ಕೈಗೊಂಡ ದಿಟ್ಟ ನಿರ್ಧಾರ ಬೆಂಗಳೂರಿನ ಭವಿಷ್ಯವನ್ನು ಗಟ್ಟಿ ಮಾಡಿತು. ಇಲ್ಲದೇ ಹೋಗಿದ್ದರೇ ಬೆಂಗಳೂರು ರಕ್ತ ಸಿಕ್ತ ಅಧ್ಯಾಯ ದಾಖಲಿಸಬೇಕಿತ್ತು. ಚರಿತ್ರೆಯ ರಾಜಕಾರಣದಲ್ಲಿ ಸಿಕ್ಕು ನರಳಬೇಕಿದ್ದ ಬೆಂಗಳೂರಿನ ಕಥೆಯನ್ನು ಮತ್ತೆ ಬರೆದ ಶ್ರೇಯ ಚಿಕ್ಕದೇವರಾಜ ಒಡೆಯರ್ಗೆ ಸಲ್ಲಬೇಕು.
ಔರಂಗಜೇಬನೊಂದಿಗೆ ಉತ್ತಮ ಮೈತ್ರಿ ಹೊಂದಿದ್ದ ಚಿಕ್ಕದೇವರಾಜ ಒಡೆಯರ್ ಆಗ ಮೈಸೂರು ಸಂಸ್ಥಾನವನ್ನು ಸ್ವತಂತ್ರ್ಯ ರಾಜ್ಯವೆಂದಾಗಿ ಆಳ್ವಿಕೆ ನಡೆಸುತ್ತಿದ್ದರು. ಶಿವಾಜಿಯ ಮಲ ಸಹೋದರ ಎಕೋಜಿಯ ಅಶ್ವದಳವನ್ನು ಸೋಲಿಸಿದ ಚಿಕ್ಕದೇವರಾಜ ಒಡೆಯರ್ ಅಂದು ಬೆಂಗಳೂರಿನ ರಕ್ಷಣೆಗೆ ಠೊಂಕ ಕಟ್ಟಿ ನಿಂತಿದ್ದರು. ಅಂದು ಚಿಕ್ಕದೇವರಾಜ ಒಡೆಯರ್ ಎಕೋಜಿ ಹಾಗೂ ಮರಾಠ ಸೈನ್ಯದ ವಿರುದ್ಧ ಹೋರಾಡದೇ ಇದ್ದಿದ್ದರೇ ಬೆಂಗಳೂರು ಮೊಘಲರು ಹಾಗೂ ಮರಾಠರ ನಡುವಿನ ಯುದ್ಧದ ರಣರಂಗವಾಗುತ್ತಿತ್ತು. ಬೆಂಗಳೂರು ಮೈಸೂರು ಸಂಸ್ಥಾನದ ಕೈ ತಪ್ಪಿ ಮರಾಠರಿಗೋ ಮೊಘಲರಿಗೋ ಉಡುಗೊರೆಯಾಗುತ್ತಿತ್ತು. ಬೆಂಗಳೂರಿನ ಕೆಂಪೇಗೌಡರ ಸ್ಮೃತಿ ಕಣ್ಮರೆಯಾಗಿರುತ್ತಿತ್ತು.
ತಂಜೂರ್ ಅಥವಾ ತಂಜಾವೂರನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡಿದ್ದ ಯೆಕೋಜಿ ಅಥವಾ ವೆಂಕೋಜಿ, ಛತ್ರಪತಿ ಶಿವಾಜಿಯ ಮಲ ಸಹೋದರ. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಶಿವಾಜಿಯ ಮರಣಾನಂತರ ಮರಾಠರ ಆಳ್ವಿಕೆಯ ಬಿಗಿ ತಪ್ಪಿತು. ಹಣಕಾಸಿನ ವಿಚಾರದಲ್ಲಿ ಮರಾಠ ಅರಸರು ದುರ್ಬಲಾಗತೊಡಗಿದ್ರು. ಅತ್ತ ಮೊಘಲ್ ಖಾವಂದರೂ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಸಮಯ ಸಾಧಿಸಿ ಬೆಂಗಳೂರಿನ ಮೇಲೆ ಮುತ್ತಿಗೆ ಹಾಕಲು ಔರಂಗಜೇಬ ನಿರ್ಧರಿಸಿದ್ದ.
ಕೆಲವು ಚರಿತ್ರಾಕಾರರಲ್ಲಿ ಬೆಂಗಳೂರಿನ ಮಾರಾಟದ ವಿಚಾರದಲ್ಲಿ ಗೊಂದಲಗಳಿವೆ. ಬೆಂಗಳೂರನ್ನು ಖರೀದಿ ಮಾಡಿದ್ದು ಚಿಕ್ಕದೇವರಾಜ ಒಡೆಯರ್ ಅನ್ನೋದು ಸತ್ಯವಾದ್ರೂ, ಯಾರಿಂದ ಖರೀದಿ ಮಾಡಿದ್ರು ಅನ್ನೋ ಪ್ರಶ್ನೆಗೆ ಸಮರ್ಪಕ ಉತ್ತರ ಸಿಕ್ತಿಲ್ಲ. ಕೆಲವು ಮೂಲಗಳ ಪ್ರಕಾರ ಚಿಕ್ಕದೇವರಾಜ ಒಡೆಯರ್ ಹಣ ಕೊಟ್ಟಿದ್ದು ಮರಾಠರ ಎಕೋಜಿಗೆ ಆದ್ರೆ ಇನ್ನೂ ಕೆಲವು ಮೂಲಗಳ ಪ್ರಕಾರ ಅದಾಗಲೇ ಬೆಂಗಳೂರು ಔರಂಗಜೇಬನ ಪಾಲಾಗಿತ್ತು. ಆದ್ರೆ ಒಂದಂತೂ ಸತ್ಯ, ಬೆಂಗಳೂರಿನ ಭಾಗ್ಯವನ್ನು ಕೆಂಪೇಗೌಡರ ನಂತರ ಮತ್ತೆ ಪುನಃ ಬರೆದ ಕೀರ್ತಿ ಚಿಕ್ಕದೇವರಾಜ ಒಡೆಯರ್ಗೆ ಸಲ್ಲಬೇಕು.
ಮೊಘಲರು ಬಿಜಾಪುರ ಮುತ್ತಿಗೆ ಹಾಕಿ ಜಯಗಳಿಸಿದ ನಂತರ ಬೆಂಗಳೂರಿನ ಕಡೆಗೆ ಹೆಜ್ಜೆ ಹಾಕಿದ್ದರು. ಇದೇ ವೇಳೆ ಆಡಳಿತ ನಡೆಸಲು ಬೊಕ್ಕಸಕ್ಕೆ ಹಣದ ಅಗತ್ಯ ಎದುರಾದಾಗ ಎಕೋಜಿ ಬೆಂಗಳೂರು ಪ್ರಾಂತ್ಯವನ್ನು ಹರಾಜು ಹಾಕಲು ನಿರ್ಧರಿಸಿದ್ದ. ಈ ವೇಳೆ ಮಧ್ಯಸ್ತಿಕೆ ವಹಿಸಿದ ಚಿಕ್ಕದೇವರಾಜ ಒಡೆಯರ್ 3 ಲಕ್ಷ ರೂಪಾಯಿಗಳಿಗೆ ಬೆಂಗಳೂರು ಪಟ್ಟಣ ಮಾರಾಟ ಮಾಡುವ ಒಪ್ಪಂದ ಮಾಡಿಕೊಂಡರು. ಈ ವ್ಯವಹಾರ ಪ್ರಗತಿಯಲ್ಲಿರುವಾಗಲೇ ಖಾಸಿಂ ಖಾನ್ ನೇತೃತ್ವದಲ್ಲಿ ಮೊಘಲ್ ಸೈನ್ಯ ಬೆಂಗಳೂರಿಗೆ ಬಂದು ತನ್ನ ಆಡಳಿತ ಧ್ವಜ ಸ್ಥಾಪನೆ ಮಾಡಿತು.. ಅದು 10 ಜುಲೈ 1687.
ಈ ಸಂದರ್ಭದಲ್ಲಿ ಪ್ರತಿಕಾರ ತೀರಿಸಿಕೊಳ್ಳಲು ಮರಾಠರು ಮುಂದಾದಾಗ ಚಿಕ್ಕದೇವರಾಜ ಒಡೆಯರ್, ಮೈಸೂರು ಸಂಸ್ಥಾನದ ಭವಿಷ್ಯದ ದೃಷ್ಟಿಯಿಂದ ಔರಂಗಜೇಬನ ಪರವಾಗಿ ಹೋರಾಡಿದ್ದರು. ಎಕೋಜಿಯ ಅಶ್ವದಳ ಹಾಗೂ ಪದಾತಿ ದಳವನ್ನು ಸಮರ್ಥವಾಗಿ ಎದುರಿಸಿದ ಚಿಕ್ಕದೇವರಾಜ ಒಡೆಯರ್ ಮರಾಠ ಸೈನ್ಯವನ್ನು ದೂಳಿಪಟ ಮಾಡಿದರು. ಆದ್ರೆ ಬಿ.ಮುದ್ದಾಚಾರ್ಯರ ಸಂಶೋಧನೆಗಳ ಪ್ರಕಾರ ಚಿಕ್ಕದೇವರಾಜ ಒಡೆಯರ್ ಬೆಂಗಳೂರನ್ನು ಪಡೆದುಕೊಳ್ಳಲು ತೆತ್ತ ಹಣ ಬರೋಬ್ಬರಿ 3 ಲಕ್ಷ ರೂಪಾಯಿ.
ಈ ಘಟನೆಯಾಗಿ ಈಗ ಸುದೀರ್ಘ 330 ವರ್ಷಗಳೇ ಉರುಳಿವೆ. ಚರಿತ್ರೆಯ ಸಂಶೋಧಕ ಬಿ ಮುದ್ದಾಚಾರ್ಯರು ಬರೆದಿರುವ ದಿ ಮೈಸೂರ್ ಮೊಘಲ್ ರಿಲೇಷನ್ಸ್ (1686-87) ಪುಸ್ತಕದಲ್ಲಿ ಈ ಎಲ್ಲಾ ಸಂಗತಿಗಳನ್ನು ವಿವರವಾಗಿ ಉಲ್ಲೇಖಿಸಲಾಗಿದೆ. ಆದ್ರೆ ಚಿಕ್ಕದೇವರಾಜ ಒಡೆಯರ್ ಬೆಂಗಳೂರನ್ನು ಖರೀದಿಸಿದ್ದು ಮೊಘಲರಿಂದಲೋ ಅಥವಾ ಮರಾಠರ ಎಕೋಜಿಯಿಂದಲೋ ಅನ್ನುವ ಸಂಗತಿ ಇಂದಿಗೂ ಗೊಂದಲಮಯವಾಗಿದೆ. ಕೆಲವು ಇತಿಹಾಸಕಾರರ ಪ್ರಕಾರ ಈ ನೇರ ಒಪ್ಪಂದ ನಡೆದಿದ್ದು ಎಕೋಜಿ ಹಾಗೂ ಚಿಕ್ಕದೇವರಾಜ ಒಡೆಯರ್ ನಡುವೆ. ಇನ್ನೂ ಕೆಲವು ಸಂಶೋಧಕರ ಪ್ರಕಾರ ಒಪ್ಪಂದವಾಗಿದ್ದು ಹೌದು. ಆದ್ರೆ ಮೊಘಲರ ಸೈನ್ಯ ಬೆಂಗಳೂರಿಗೆ ಬಂದಿತ್ತು, ಚಿಕ್ಕದೇವರಾಜ ಒಡೆಯರ್ ಮೊಘಲರ ಪರವಾಗಿ ಮರಾಠರ ವಿರುದ್ಧ ಹೋರಾಟ ಮಾಡಿ ಗೆದ್ದ ನಂತರ ಮರಾಠರು ಪಲಾಯನಗೈದರು. ಒಂದರ್ಥದಲ್ಲಿ ಬೆಂಗಳೂರ ಮೊಘಲರ ಪಾಲಾಯಿತು. ಆಗ ಚಿಕ್ಕದೇವರಾಜ ಒಡೆಯರ್ ಹಣ ಕೊಟ್ಟು ಬೆಂಗಳೂರನ್ನು ಕ್ರಯಕ್ಕೆ ಪಡೆದುಕೊಂಡಿದ್ದು ಮೊಘಲರಿಂದ. ಹೀಗನ್ನತ್ತವೆ ಇತಿಹಾಸ ಅನ್ವೇಷಕರ ಇನ್ನೊಂದು ಸಂಶೋಧನೆ.
ಹಾಗೇ ಚಿಕ್ಕದೇವರಾಜ ಒಡೆಯರ್ ಬೆಂಗಳೂರನ್ನು ಅಭಿವೃದ್ದಿಪಡಿಸದೇ ಇದ್ದಿದ್ರೆ, ನಮ್ಮ ಬೆಂಗಳೂರು ಮರಾಠರ ಹಾಗೂ ಮೊಘಲರ ಕದನ ಕೇಂದ್ರವಾಗಿ ತನ್ನ ಭವ್ಯತೆ ಕಳೆದುಕೊಳ್ಳುತ್ತಿತ್ತು ಅನ್ನುವ ಸಂಗತಿಯನ್ನೂ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಮರಾಠರು ಇಲ್ಲಿ ಗಟ್ಟಿಯಾಗಿ ತಳವೂರಿದ್ದರೆ ಬೆಂಗಳೂರು ಮತ್ತೊಂದು ಬೆಳಗಾವಿಯಂತಾಗಿ ಕನ್ನಡದ ಅಸ್ತಿತ್ವ ಕಣ್ಮರೆಯಾಗಿಬಿಡುತ್ತಿತ್ತು ಅನ್ನುವ ಅಭಿಪ್ರಾಯಗಳೂ ಇವೆ. ಇದರ ಇನ್ನಷ್ಟು ವಿವರಗಳ ಬಗ್ಗೆ ಮತ್ತಷ್ಟು ಸುದೀರ್ಘವಾಗಿ ಸಂಶೋಧನೆಯಾಗಬೇಕು ಅನ್ನುವುದು ಇತಿಹಾಸದ ಆಸಕ್ತರ ಅಭಿಪ್ರಾಯ.
ಬೆಂಗಳೂರು ಪಟ್ಟಣವನ್ನು ಖರೀದಿಸಿ ಅಭಿವೃದ್ಧಿ ಪಡಿಸಿದ ಚಿಕ್ಕದೇವರಾಜ ಒಡೆಯರ್ ಬೆಂಗಳೂರಿನ ಸಂಪರ್ಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಿದ ಹರಿಕಾರರು. ಚಿಕ್ಕದೇವರಾಜ ಒಡೆಯರ್ ಹಾಗೂ ಜಯಚಾಮರಾಜ ಒಡೆಯರ್ ಕಾಲದಲ್ಲಿ ಬೆಂಗಳೂರಿನ ಮೂಲಸೌಕರ್ಯಗಳು ಸಾಕಷ್ಟು ಅಭಿವೃದ್ದಿ ಕಂಡವು. ಅಠಾರ ಕಚೇರಿ ಅಥವಾ ಇಂದಿನ ಹೈ ಕೋರ್ಟ್, ಚಾಮರಾಜಪೇಟೆಯ ಕೋಟೆ ವೆಂಕಟರಮಣ ಸ್ವಾಮಿ ದೇವಾಲಯ ಇತ್ಯಾದಿ ಬೆಂಗಳೂರಿನ ಪಾರಂಪರಿಕ ಕಟ್ಟಡಗಳು ನಿರ್ಮಾಣವಾಗಿದ್ದೇ ಚಿಕ್ಕದೇವರಾಜ ಒಡೆಯರ್ ಕಾಲದಲ್ಲಿ ಅನ್ನುತ್ತವೆ ಚರಿತ್ರೆಯ ಮೂಲಗಳು. ಒಂದರ್ಥದಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಕೆಂಪೇಗೌಡರಷ್ಟೇ ಕಾರಣಕರ್ತರು ಚಿಕ್ಕದೇವರಾಜ ಒಡೆಯರ್ ಹಾಗೂ ಮೈಸೂರಿನ ಯದುವಂಶದ ಎಲ್ಲಾ ಅರಸರು.
ಇಂದು ನಮ್ಮ ಬೆಂಗಳೂರು ವಿಶ್ವದಲ್ಲೆ ಪ್ರಸಿದ್ಧವಾಗಿರುವ ಬಹುಸಂಸ್ಕೃತಿಯ ತೊಟ್ಟಿಲು ಅನ್ನುವ ಶ್ರೇಯಕ್ಕೆ ಪಾತ್ರವಾಗಿದೆ. ಇಂದಿನ ಬೆಂಗಳೂರಿನ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಮೂಲಭೂತ ಸೌಕರ್ಯಗಳ ಸಿರಿವಂತಿಕೆಗೆ 17, 18 ಹಾಗೂ 19ನೇ ಶತಮಾನದಲ್ಲಿ ಬೆಂಗಳೂರನ್ನು ಆಳಿದ ಎಲ್ಲರ ಪಾಲೂ ಇದೆ. ಆದ್ರೆ ಇತಿಹಾಸ ನೆನಪಿನಲ್ಲಿಟ್ಟುಕೊಳ್ಳಬೇಕಾಗಿರೋದು ಮಾತ್ರ ಕೆಂಪೇಗೌಡರ ವಂಶಸ್ಥರು ಹಾಗೂ ಮೈಸೂರಿನ ಯದುವಂಶದ ಒಡೆಯರ ಶ್ರಮ ಹಾಗೂ ದೂರದೃಷ್ಟಿಯನ್ನು.
ಇತಿಹಾಸ ಅನ್ನೋದೆ ಹಾಗೆ ತನ್ನೊಡಲಲ್ಲಿ ಅದೆಷ್ಟೋ ವಿಸ್ಮಯಗಳನ್ನು, ಕೌತುಕಗಳನ್ನು ರೋಮಾಂಚನಕಾರಿ ಮಾಹಿತಿಯನ್ನು ತುಂಬಿಕೊಂಡಿರತ್ತೆ. ನಮ್ಮ ಬೆಂಗಳೂರಿನ ಚರಿತ್ರೆ ಕೂಡಾ ಅಂತಹದ್ದೇ ರೋಚಕತೆಗಳ ಹಂದರ.
-ವಿಭಾ (ವಿಶ್ವಾಸ್ ಭಾರದ್ವಾಜ್)






