ಮೇ 20, ಇದು ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ದಂಪತಿಗೆ ವಿಶೇಷವಾದ ದಿನ. ಮೇ 20 ಮಾಣಿಕ್ಯನ ಪ್ರೀತಿಯ ಮಗಳು ಸಾನ್ವಿ ಹುಟ್ಟಿದ ದಿನ. 16 ವರ್ಷ ತುಂಬಿದ ಮಗಳಿಗೆ ಸುದೀಪ್ ವಿಶೇಷ ಹಾಡಿನ ಉಡುಗೊರೆ ನೀಡಿದ್ದಾರೆ. ಈ ಹಾಡನ್ನು ಸುದೀಪ್ ಅವರೇ ಹಾಡಿ ಮಗಳಿಗೆ ಗಿಫ್ಟ್ ಆಗಿ ನೀಡಿದ್ದಾರೆ.
ಅಭಿಮಾನಿಗಳು ಫಿದಾ!
“ನಿನ್ನೆ ಮೊನ್ನೆ ಇದ್ದ ಹಾಗಿದೆ, ಹೇಗಪ್ಪಾ ನಂಬೋದು, ನನ್ನ ಮಗಳೀಗ, ಹದಿನಾರು ವರುಷ. ನೀ ಇಟ್ಟ ಅಂಬೆಗಾಲು, ಮುದ್ದಾದ ಮೊದಲುಗಳು, ಕೂಡಿಟ್ಟಿರುವೆ ನಾ, ಒಂದೊAದು ನಿಮಿಷ. ಎದೆಯೆತ್ತರ ಬೆಳೆದಿರೋ, ಕನಸು ನೀನು ನಿನ್ನಿಂದಲೇ ಕಲಿಯುವ, ಕೂಸು ನಾನು, ಆಸೆ ಬುರುಕ ಅಪ್ಪ ನಾನು ಮತ್ತೆ ಮಗುವಾಗು ನೀನು” ಎನ್ನುವ ಸಾಲುಗಳಿರುವ ಈ ಹಾಡು ಅಭಿಮಾನಿಗಳ ಮನಗೆದ್ದಿದೆ.
ಇನ್ನು ಹಾಡಿನಲ್ಲಿ ಸಾನ್ವಿಯ ಮುದ್ದಾದ ಫೋಟೋಗಳು ಮತ್ತು ವಿಡಿಯೋಗಳಿವೆ. ಪುಟ್ಟ ಸಾನ್ವಿಯ ಹುಟ್ಟುಹಬ್ಬದ ವಿಡಿಯೋ, ಮೊದಲ ಮಾತು, ಮೊದಲ ನಡಿಗೆ ಹೀಗೆ ಸಾಕಷ್ಟು ಮೊದಲುಗಳಿವೆ.
ಮೂವರಿಗೆ ಧನ್ಯವಾದ ತಿಳಿಸಿದ ಕಿಚ್ಚ
ಈ ವಿಶೇಷ ಹಾಡನ್ನು ತಯಾರಿಸಲು ಸಹಾಯ ಮಾಡಿದ ಮೂವರಿಗೆ ಸುದೀಪ್ ಟ್ವಿಟ್ಟರ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ. ಆಲೋಚನೆಗಳನ್ನು ಪದಗಳಿಗೆ ಇರಿಸಿ, ಸಂಗೀತ ಸ್ಪರ್ಶ ನೀಡಿದ ವಾಸುಕಿ ವೈಭವ್, ವಿಡಿಯೋ ಎಡಿಟ್ ಮಾಡಿದ ನಿರ್ದೇಶಕ ಅನೂಪ್ ಭಂಡಾರಿ ಮತ್ತು ಹಾಡನ್ನು ರೆಕಾರ್ಡ್ ಮಾಡಲು ಸಹಕರಿಸಿದ ವಿಜಯ್ ಅವರಿಗೆ ಬಾದ್ ಷಾ ಧನ್ಯವಾದ ತಿಳಿಸಿದ್ದಾರೆ.
ಇನ್ನು ಅಭಿಮಾನಿಗಳು, ಚಿತ್ರರಂಗದ ಗಣ್ಯರು ಸುದೀಪ್ ಮಗಳಿಗಾಗಿ ಹಾಡಿರುವ ಹಾಡನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಈಗಾಗಲೆ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಲೈಕ್ಸ್ ಗಿಟ್ಟಿಸಿಕೊಳ್ಳುತ್ತಿದೆ.








