ಬ್ರೆಜಿಲ್, ಮೇ 21 : ಸುಮಾರು 3 ತಿಂಗಳ ಲಾಕ್ ಡೌನ್ ನಂತರ ಹಲವೆಡೆ ಕೊರೋನಾ ವೈರಸ್ ಸೋಂಕು ಹತೋಟಿಯಲ್ಲಿ ಇದ್ದರೆ, ಇನ್ನೂ ಕೆಲವೆಡೆ ವೇಗವಾಗಿ ವ್ಯಾಪಿಸುತ್ತಿದೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಕೊರೊನಾ ಪ್ರಕರಣ ಅಮೆರಿಕದಲ್ಲಿ ದಾಖಲಾಗಿದ್ದರೆ, ಬ್ರೆಜಿಲ್ 6ನೇ ಸ್ಥಾನದಲ್ಲಿದೆ. ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗದೆ ಬ್ರೆಜಿಲ್ ಕಂಗಾಲಾಗಿದೆ. ಇದೇ ಕಾರಣಕ್ಕೆ ಬ್ರೆಜಿಲ್ ಆರೋಗ್ಯ ಸಚಿವ ನೆಲ್ಸನ್ ಟೀಶ್ ತಮ್ಮ ಹುದ್ದೆಗೆ ರಾಜೀನಾಮೆ ಕೂಡ ನೀಡಿದ್ದಾರೆ. ಬ್ರೆಜಿಲ್ ನಲ್ಲಿ ಈಗಾಗಲೇ ಕೊರೊನಾ ಸೋಂಕು ಪ್ರಕರಣಗಳು 2 ಲಕ್ಷಕ್ಕೂ ಹೆಚ್ಚು ವರದಿಯಾಗಿದ್ದು, ಸುಮಾರು 14,000 ಕ್ಕೂ ಹೆಚ್ಚು ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಆದರೆ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದ್ದರೂ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸನಾರೊ ಉಡಾಫೆಯ ಪರಮಾವಧಿಯನ್ನು ಪ್ರದರ್ಶಿಸುತ್ತಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹೊರತಾಗಿಯೂ ದೇಶದ ಆರ್ಥಿಕತೆಯತ್ತ ಗಮನಹರಿಸಿದ್ದಾರೆ. ಲಾಕ್ ಡೌನ್ ತೆರವುಗೊಳಿಸಬೇಕೆಂದು ನಡೆಯುತ್ತಿರುವ ಪ್ರತಿಭಟನೆಗಳಿಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ ಮಾತ್ರವಲ್ಲ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜನಪ್ರಿಯತೆಗಾಗಿ ಹಪಾಹಪಿಸುವ ಬೊಲ್ಸನಾರೊ ಪ್ರತಿಭಟನೆಗಳಲ್ಲಿ ಭಾಗವಹಿಸಿ ಗಿಮಿಕ್ ಗಳನ್ನು ಮಾಡುವ ಮೂಲಕ ಪ್ರತಿದಿನ ಸುದ್ದಿಯಲ್ಲಿ ಇದ್ದಾರೆ.
1.2 ಕೋಟಿ ಜನಸಂಖ್ಯೆ ಇರುವ ಸಾವೊ ಪೌಲೊದಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲದೆ ರೋಗಿಗಳು ಒದ್ದಾಡುತ್ತಿದ್ದಾರೆ. 38,605 ಕೊರೊನಾ ಸೋಂಕು ಪ್ರಕರಣಗಳು ಸಾವೊ ಪೌಲೊದಲ್ಲಿ ಪತ್ತೆಯಾಗಿದೆ ಮತ್ತು ದೇಶದಲ್ಲೇ ಅಧಿಕ ಮರಣಗಳು ಸಂಭವಿಸಿದೆ. ಅಷ್ಟೇ ಅಲ್ಲ ಕೊರೊನಾ ವೈರಸ್ ದೂರದ ಪ್ರದೇಶಗಳಿಗೂ ಹರಡುತ್ತಿದ್ದು, ಸಾಕಷ್ಟು ಕೊರೊನಾ ಪತ್ತೆ ಪರೀಕ್ಷೆಗಳು ನಡೆಯುತ್ತಿಲ್ಲ. ಇಷ್ಟೆಲ್ಲಾ ಆಗುತ್ತಿದ್ದರೂ ವಿಶ್ವವನ್ನೇ ಕಂಗೆಡಿಸಿರುವ ಕೊರೊನಾ ವೈರಸ್ ನ ಬಗ್ಗೆ ನಿರ್ಲಕ್ಷ್ಯ ಮನಸ್ಥಿತಿ ಹೊಂದಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸನಾರೊ ಮಾತ್ರ ದೇಶದ ಆರ್ಥಿಕತೆ ಮುಖ್ಯ ಎಂದು ಪ್ರತಿಪಾದಿಸುತ್ತಿದ್ದಾರೆ. ಬ್ರೆಜಿಲ್ ನಲ್ಲಿ ರಾಜ್ಯಗಳ ಮೇಯರ್ ಗಳು ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಹೆಣಗಾಡುತ್ತಿದ್ದರೆ, ದೇಶದ ಅಧ್ಯಕ್ಷ ಮಾತ್ರ ಕೋವಿಡ್ ಅನ್ನು ಒಂದು ಸಾಮಾನ್ಯ ಜ್ವರ ಎಂದೇ ಕರೆಯುತ್ತಿದ್ದಾರೆ.
ಬ್ರೆಜಿಲ್ ಆರೋಗ್ಯ ಸಚಿವ ನೆಲ್ಸನ್ ಟೀಶ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಅಧ್ಯಕ್ಷ ಜೈರ್ ಬೋಲ್ಸನಾರೊ ನಡುವಿನ ಭಿನ್ನಾಭಿಪ್ರಾಯಗಳೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಜನರ ಆರೋಗ್ಯಕ್ಕಿಂತ ರಾಷ್ಟ್ರದ ಆರ್ಥಿಕತೆಯನ್ನು ಉಳಿಸುವತ್ತ ಅಧ್ಯಕ್ಷರಿಗೆ ಗಮನ ಹೆಚ್ಚು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಫೆಡರಲ್ ಗವರ್ನರ್ ಮತ್ತು ಬ್ರೆಜಿಲ್ ನ ಸುಪ್ರೀಂ ಕೋರ್ಟ್ ಬಿಕ್ಕಟ್ಟು ತಡೆಗಟ್ಟಲು ಇಡೀ ದೇಶದ ಚಟುವಟಿಕೆಗಳನ್ನು ನಿರ್ಬಂಧಿಸಿದಾಗ ಬೋಲ್ಸನಾರೊ ರಾಷ್ಟ್ರವ್ಯಾಪಿ ಲಾಕ್ಡೌನ್ ವಿರುದ್ಧ ಪ್ರದರ್ಶನಗಳನ್ನು ನಡೆಸಿದರು. ತಮ್ಮ ಪ್ರತಿಭಟನೆಯ ಸಮಯದಲ್ಲಿ ಅವರು ಲಾಕ್ಡೌನ್ ತೆರೆಯಬೇಕು, ಇಲ್ಲದಿದ್ದರೆ ನಾವು ಹಸಿವಿನಿಂದ ಸಾಯುತ್ತೇವೆ ಎಂದು ಹೇಳಿದರು.
ಫೆಡರಲ್ ಗವರ್ನರ್ ಮತ್ತು ಬ್ರೆಜಿಲ್ ನ ಸುಪ್ರೀಂ ಕೋರ್ಟ್ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಇಡೀ ದೇಶದ ಚಟುವಟಿಕೆಗಳನ್ನು ನಿರ್ಬಂಧಿಸಿದೆ. ಆದರೆ ಕೊರೋನಾ ವೈರಸ್ ವಿರುದ್ಧ ಫೆಡರಲ್ ಗವರ್ನರ್ ಕ್ರಮಗಳು, ಅರ್ಥಿಕ ಬಿಕ್ಕಟ್ಟನ್ನು ಹೆಚ್ಚಿಸುತ್ತದೆ ಎಂದು ಅಧ್ಯಕ್ಷ ಜೈರ್ ಬೋಲ್ಸನಾರೊ ಆರೋಪಿಸಿದ್ದಾರೆ. ಲಾಕ್ ಡೌನ್
ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ತನ್ನ ಬೆಂಬಲಿಗರೊಡನೆ ಭಾಗವಹಿಸುತ್ತಿರುವ ಬೊಲ್ಸನಾರೊ ಲಕ್ಷಾಂತರ ಜನರ ಪ್ರಾಣಗಳನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ. ಬ್ರೆಜಿಲ್ ನಲ್ಲಿ ಕೊರೊನಾ ಸೋಂಕು ಸ್ವಲ್ಪಮಟ್ಟಿಗೆ ನಿಯಂತ್ರಣದಲ್ಲಿ ಇದ್ದರೆ ಅದು ಆಯಾ ರಾಜ್ಯಗಳ ಮೇಯರ್ ಗಳ ಪ್ರಯತ್ನದಿಂದ ಮಾತ್ರ.








