ನವದೆಹಲಿ : ಭಾರತದಲ್ಲಿ ದೇಶಿಯ ವಿಮಾನಗಳ ಹಾರಾಟಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಮೇ 25 ರಿಂದ ಸೀಮಿತವಾಗಿ ದೇಶಿಯ ವಿಮಾನ ಹಾರಾಟಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿದ್ದು, ಇಂದು ವಿಮಾನಯಾನ ಸಚಿವಾಲಯ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ನೂತನ ಮಾರ್ಗಸೂಚಿಯಲ್ಲಿ ಹಲವು ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.
1. ಪ್ರಯಾಣಿಕರು 2 ಗಂಟೆಗೂ ಮುಂಚೆಯೇ ವಿಮಾನ ನಿಲ್ದಾಣಕ್ಕೆ ಬರಬೇಕು
ವಿಮಾನ ಹಾರಾಟದ ನಿಗದಿತ ಸಮಯಕ್ಕೆ ಇಪ್ಪತ್ತು ನಿಮಿಷಗಳ ಮುನ್ನ ನಿರ್ಗಮನವನ್ನು ಮುಚ್ಚಲಾಗುವುದು. ಹೀಗಾಗಿ ಪ್ರಯಾಣಿಕರು ಎರಡು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ಬರಬೇಕು. ಪ್ರಯಾಣಿಕರು ವೆಬ್ ಚೆಕ್ ಇನ್ ವ್ಯವಸ್ಥೆ ಮೂಲಕ ಮುಂಚೆಯೇ ಚೆಕ್ ಇನ್ ಮಾಡಿಕೊಳ್ಳಬೇಕು. ಕೇವಲ ಒಂದು ಲಗೇಜ್ ಬ್ಯಾಗ್ ನೊಂದಿಗೆ ಪ್ರಯಾಣ ಮಾಡಬಹದಾಗಿದ್ದು, ಪ್ರಯಾಣದ ವೇಳೆ ಊಟದ ವ್ಯವಸ್ಥೆ ನಿರ್ಬಂಧಿಸಲಾಗಿದೆ.
2. ಆರೋಗ್ಯ ಸೇತು ಆಪ್ ಬಳಕೆ ಕಡ್ಡಾಯ
ಕೊರೊನಾ ಸೋಂಕು ಹಿನ್ನೆಲೆ 14 ವರ್ಷದೊಳಗಿನ ಮಕ್ಕಳು ಹೊರತುಪಡಿಸಿ ವಿಮಾನ ಪ್ರಯಾಣ ಮಾಡುವ ಎಲ್ಲರೂ ಆರೋಗ್ಯ ಸೇತು ಆಪ್ ಬಳಕೆ ಕಡ್ಡಾಯ. ವಿಮಾನ ನಿಲ್ದಾಣಕ್ಕೆ ಖಾಸಗಿ ವಾಹನಗಳಲ್ಲಿ ಆಗಮಿಸಿದಲ್ಲಿ ಡಿಜಿಟಲ್ ಪೇಮೆಂಟ್ ಗೆ ಆದ್ಯತೆ ನೀಡಬೇಕು. ಮಾಸ್ಕ್ ಗ್ಲೋಸ್ ಕಡ್ಡಾಯವಾಗಿ ಬಳಕೆ ಮಾಡಬೇಕು. ಏರ್ ಪೋರ್ಟ್ ಗೆ ಆಗಮಿಸುವ ಮೊದಲು ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಬೇಕು. ಪ್ರಯಾಣ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಜನ ಸಂದಣಿ ಪ್ರದೇಶದಲ್ಲಿ ಅನಗತ್ಯ ವಸ್ತುಗಳನ್ನು ಸ್ಪರ್ಶಿದಂತೆ ಎಚ್ಚರಿಸಬೇಕು ಎಂದು ಸಚಿವಾಲಯ ಸೂಚಿಸಿದೆ.
3. ವಿಮಾನಯಾನ ಸಂಸ್ಥೆಗಳು ಪಾಲಿಸಬೇಕಾದ ಕ್ರಮಗಳು:
ಕೇಂದ್ರ ಸರ್ಕಾರ ವಿಮಾನಯಾನ ಸಂಸ್ಥೆಗಳಿಗೂ ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚಿಸಿದೆ. ವಿಮಾನ ನಿಲ್ದಾಣ ಪ್ರವೇಶಕ್ಕೂ ಮುನ್ನ ಸಿಐಎಸ್ ಎಫ್ ನಿಂದ ಆರೋಗ್ಯ ಸೇತು ಪರಿಶೀಲನೆ ನಡೆಸಬೇಕು. ಆರೋಗ್ಯ ಸೇತುವಿನಲ್ಲಿ ಗ್ರೀನ್ ಸ್ಟೇಟಸ್ ಬಾರದಿದ್ರೆ ಪ್ರಯಾಣಕ್ಕೆ ಅವಕಾಶ ನೀಡಬಾರದು. ಸೀಟು ಹಂಚಿಕೆಯಲ್ಲಿ ಸಂಸ್ಥೆಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳವಂತೆ ನೋಡಿಕೊಳ್ಳಬೇಕು, ಲಗೇಜ್ ಚೆಕ್ ಇನ್ ಸಂದರ್ಭದಲ್ಲಿ ಸಾಮಾಜಿಕ ಅಂತರ ಮೇಲೊಸ್ತುವಾರಿಗೆ ಸಿಬ್ಬಂದಿ ನೇಮಿಸಿ ಎಂದು ತಿಳಿಸಿದೆ.
4. ದಿನ ಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಇಡುವಂತಿಲ್ಲ
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಸಾಗಿಸುವ ಬಸ್ ಸ್ಯಾನಿಟೈಸ್ ಆಗಿರಬೇಕು. ಲಗೇಜ್ ನೀಡುವಾಗ, ಪಡೆಯುವಾಗ ಸ್ಯಾನಿಟೈಸ್ ಮಾಡುವುದು ಕಡ್ಡಾಯ. ಪ್ರಯಾಣಿಕರು ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಲು ಹಲವು ಕಡೆ ವ್ಯವಸ್ಥೆ ಮಾಡಿಕೊಡಬೇಕು. ಎಲ್ಲ ಭಾಗದಲ್ಲಿ ಸ್ವಚ್ಛತೆ ಕಾಪಾಡಬೇಕು, ಸ್ಯಾನಿಟೈಸರ್ ನೀಡಬೇಕು. ವಿಮಾನ ನಿಲ್ದಾಣಗಳಲ್ಲಿ ದಿನ ಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಇಡುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಅಲ್ಲದೆ ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣದ ಸಿಬ್ಬಂದಿಯಲ್ಲಿ ರೋಗದ ಲಕ್ಷಣಗಳು ಕಂಡು ಬಂದರೆ ಎಚ್ಚರಿಕೆ ವಹಿಸಬೇಕು. ವಿಮಾನ ನಿಲ್ದಾಣದೊಳಗಿನ ಅಂಗಡಿಗಳನ್ನು ತೆರೆಯಬಹುದು, ಸಾಮಾಜಿಕ ಅಂತರ ಮತ್ತು ಡಿಜಿಟಲ್ ಪೇಮೆಂಟ್ ಗಳಿಗೆ ಆದ್ಯತೆ ನೀಡಬೇಕು.








