ಇಂದು ರಾಜ್ಯದ ಕರಾವಳಿ ಭಾಗಕ್ಕೆ ಕೊರೊನಾ ಸುನಾಮಿ ಅಪ್ಪಳಿಸಿದ್ದು, ಕರಾವಳಿಯ ಮೂರು ಜಿಲ್ಲೆಗಳಲ್ಲಿ 40 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇಂದು ಉಡುಪಿಯಲ್ಲಿ 25, ದಕ್ಷಿಣ ಕನ್ನಡದಲ್ಲಿ 06, ಉತ್ತರ ಕನ್ನಡದಲ್ಲಿ 9 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.
ದುಬೈ ಮತ್ತು ಮಹಾರಾಷ್ಟ್ರದಿಂದ ಬರುತ್ತಿರುವ ಜನರಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದು ಕರಾವಳಿ ಮಂದಿಯ ಚಿಂತೆಗೆ ಕಾರಣವಾಗಿದೆ. ಮಹಾರಾಷ್ಟ್ರದ ಮಲ್ಲಚಾಂದಿವಲ್ಲಿ, ಮುಂಬೈ, ಸಾಯಿಲ್, ಥಾಣೆ, ಪುಣೆ ಸೇರಿದಂತೆ, ತೆಲಂಗಾಣ, ಕೇರಳದಿಂದ ಬಂದವರಿಗೆ ಸೋಂಕು ತಾಗಿರುವುದು ದೃಢವಾಗಿದೆ.
ಇಂದು 199 ವರದಿ ಉಡುಪಿ ಜಿಲ್ಲಾಡಳಿತದ ಕೈ ಸೇರಿದ್ದು, ಅದರಲ್ಲಿ 25 ಜನರಿಗೆ ಸೋಂಕು ತಾಗಿರುವುದು ದೃಢವಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೇ 15 ರಂದು ದುಬೈಯಿಂದ ಆಗಮಿಸಿದ ಆರು ಮಂದಿಯಲ್ಲಿ ಕೋವಿಡ್-19 ಪಾಸಿಟಿವ್ ಕಾಣಿಸಿಕೊಂಡ ಬಳಿಕ ಮೇ 20 ರವರೆಗೆ ಮತ್ತೆ ಹೊಸದಾಗಿ 18 ಪ್ರಕರಣಗಳು ವರದಿಯಾಗಿವೆ. ಮೇ 18 ರಂದು ದುಬೈಯಿಂದ ಬಂದಿರುವ 48 ಮಂದಿ ಉಡುಪಿ ಮತ್ತು ಮಣಿಪಾಲಗಳ ಹೊಟೇಲ್‌ಗಳಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ ಮತ್ತೆ ದುಬೈ ಕಂಟಕ
ದಕ್ಷಿಣ ಕನ್ನಡ ಜಿಲ್ಲೆಗೆ ಮತ್ತೆ ದುಬೈ ಕಂಟಕ ಎದುರಾಗಿದ್ದು, ಮೇ 18 ರಂದು ದುಬೈನಿಂದ ಬಂದ 6 ಮಂದಿಯಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಸದ್ಯ ಸೋಂಕಿತರನ್ನು ವೆನ್ಲಾಕ್ ಆಸ್ಪತ್ರೆ ಗೆ ಸ್ಥಳಾಂತರ ಮಾಡಲಾಗಿದೆ. ಈ ಸೋಂಕಿತರ ಪೈಕಿ 5 ಮಂದಿ ದಕ್ಷಿಣ ಕನ್ನಡದ ಮೂಲದವರಾಗಿದ್ದು, ಓರ್ವ ಕಲಬುರ್ಗಿ ನಿವಾಸಿ ಎನ್ನಲಾಗಿದೆ.
ಉತ್ತರ ಕನ್ನಡದಲ್ಲಿ ಮಹಾ ಸ್ಫೋಟ
ಉತ್ತರ ಕನ್ನಡದಲ್ಲಿ ಇಂದು 9 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರೆಲ್ಲರೂ ಮುಂಬೈ ಹಿನ್ನೆಲೆ ಹೊಂದಿದ್ದಾರೆ.








