ಬೆಂಗಳೂರು, ಮೇ21 : ಶಿವಮೊಗ್ಗದ ಸಾಗರದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಎಫ್ ಐಆರ್ ದಾಖಲಿಸಿರುವ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಒತ್ತಾಯಿಸಿ, ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.
ಸಿಎಂಗೆ ಪತ್ರ ಬರೆದಿರುವುದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಡಿ.ಕೆ.ಶಿವಕುಮಾರ್, ಸಾಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ನೀಡಿರುವ ಸುಳ್ಳು ದೂರು ಆಧರಿಸಿ ಸೋನಿಯಾಗಾಂಧಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಪೊಲೀಸ್ ಅಧಿಕಾರಿ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಎಫ್ ಐಆರ್ ದಾಖಲಿಸಿದ್ದಾರೆ. ಕೂಡಲೇ ಆ ಅಧಿಕಾರಿಯನ್ನ ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಮಾತ್ರವಲ್ಲದೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮತ್ತು ಶಿವಮೊಗ್ಗ ಎಸ್.ಪಿಗೂ ಡಿ.ಕೆ.ಶಿವಕುಮಾರ್ ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಧಾನಿ ಮೋದಿ, ಪಿಎಂ ಕೇರ್ ಫಂಡ್ ದುರ್ಬಳಕೆ ಮಾಡಿಕೊಂಡಿದ್ದಾರೆ ಆರೋಪಿಸಿತ್ತು. ಈ ಹಿನ್ನೆಲೆ ಕಾಂಗ್ರೆಸ್ ತನ್ನ ಟ್ವೀಟ್ ಮೂಲಕ ಪ್ರಧಾನಿ ಮೋದಿ ಅವರನ್ನು ಅವಹೇಳನ ಮಾಡಿದೆ ಎಂದು ಆರೋಪಿಸಿ ಸಾಗರ ಪಟ್ಟಣ ಠಾಣೆಯಲ್ಲಿ ವಕೀಲ ಪ್ರವೀಣ್ ಎಂಬುವವರು ಸೋನಿಯಾ ಗಾಂಧಿಯವರ ವಿರುದ್ಧ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಐಎನ್‌ಸಿ ಕಚೇರಿಯಿಂದ ತಪ್ಪು ಸಂದೇಶಗಳನ್ನ ಹರಿಬಿಡಲಾಗಿದ್ದು, ಭಾರತ ಸರ್ಕಾರದ ಬಗ್ಗೆ ಅಪನಂಬಿಕೆ ಹುಟ್ಟುಹಾಕಲಾಗುತ್ತಿದೆ ಎಂದು ದೂರಿನಲ್ಲಿ ವಕೀಲರು ಆರೋಪಿಸಿದ್ದಾರೆ.
ವಕೀಲ ಪ್ರವೀಣ್ ಅವರು ನೀಡಿದ ದೂರು ಆಧರಿಸಿ ಸಾಗರ ಪಟ್ಟಣ ಠಾಣೆ ಪೊಲೀಸರು, ಐಪಿಸಿ ಸೆಕ್ಷನ್ 153 ಮತ್ತು 505(1) (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.








