ಪಿಯು ಪರೀಕ್ಷೆಗಳಿಗೆ ಗೈರುಹಾಜರಾದರೆ ಮರುಪರೀಕ್ಷೆಗೆ ಅವಕಾಶವಿಲ್ಲ – Saaksha Tv
ಬೆಂಗಳೂರು: ಹಿಜಾಬ್ ವಿವಾದದ ಕಾರಣಕ್ಕೆ ವಿದ್ಯಾರ್ಥಿಗಳು ಪಿಯು ಪರೀಕ್ಷೆಗಳಿಗೆ ಗೈರುಹಾಜರಾದರೆ ಅವರಿಗೆ ಮರುಪರೀಕ್ಷೆ ಇರುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ
ಈ ಕುರಿತು ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿಜಾಬ್ ತೆಗೆದು ಪರೀಕ್ಷಾ ಕೇಂದ್ರಕ್ಕೆ ಬರಬೇಕು. ಯಾರೂ ಕೂಡ ಹಠ ಮಾಡಿ ಶೈಕ್ಷಣಿಕ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ಆದೇಶವನ್ನು ಕೆಲವರು ವಿರೋಧಿಸಿದ್ದಾರೆ. ಅಂತಹವರ ಪರವಾಗಿ ಕಾಂಗ್ರೆಸ್‌ನವರು ಮಾತನಾಡುವುದು ಸರಿಯಲ್ಲ. ವಿದ್ಯಾರ್ಥಿಗಳು ಹೈಕೋರ್ಟ್ ಆದೇಶ ಪಾಲಿಸಿ, ಶಾಲೆ, ಕಾಲೇಜು, ಪರೀಕ್ಷಾ ಕೇಂದ್ರಗಳಿಗೆ ಹಿಜಾಬ್ ತೆಗೆದು ಬರಬೇಕು. ಹಿಜಾಬ್‌ಗಾಗಿ ಹಠ ಹಿಡಿದು ಕೂತರೆ ಇಡೀ ವರ್ಷದ ಶೈಕ್ಷಣಿಕ ಜೀವನ ವ್ಯರ್ಥವಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂದು ವಿನಂತಿಸಿದ್ದಾರೆ.
ಅಲ್ಲದೆ ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು, ಶಾಲಾ – ಕಾಲೇಜುಗಳು ಬಂದ್ ಆಗಿವೆ. ಈ ಕುರಿತು ಮಾತನಾಡಿದ ಅವರು ಜಿಲ್ಲೆಯಲ್ಲಿ ಸದ್ಯ ಪರಿಸ್ಥಿತಿ ಉದ್ವಿಗ್ನತೆಯಿಂದ ಕೂಡಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ ಶಾಲೆಗಳನ್ನು ಮರುಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.








