ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ – Saaksha Tv
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುರುವಾರ ಉಕ್ರೇನ್ನಲ್ಲಿ “ಮಿಲಿಟರಿ ಕಾರ್ಯಾಚರಣೆ” ಘೋಷಿಸಿದ್ದಾರೆ.
ಈ ಮೂಲಕ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿಯೇ ಬಿಟ್ಟಿದೆ. ಪಾಶ್ಚಿಮಾತ್ಯ ಆಕ್ರೋಶ ಮತ್ತು ಯುದ್ಧವನ್ನು ಪ್ರಾರಂಭಿಸಬೇಡಿ ಎಂಬ ಜಾಗತಿಕ ಮನವಿಯನ್ನು ಧಿಕ್ಕರಿಸಿ ಪುಟಿನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಪುಟಿನ್ ಅವರು ಟಿವಿ ಮಾಧ್ಯಮದ ಮೂಲಕ ಬೆಳಿಗ್ಗೆ 6:00 ಗಂಟೆಗೆ ಯುದ್ಧದ ಉದ್ದೇಶಗಳನ್ನು ಘೋಷಿಸಿ ಎಲ್ಲರಲ್ಲೂ ಅಚ್ಚರಿ ಮತ್ತು ಆತಂಕ ಸೃಷ್ಟಿಸಿದ್ದಾರೆ.
“ನಾನು ಮಿಲಿಟರಿ ಕಾರ್ಯಾಚರಣೆಯ ನಿರ್ಧಾರವನ್ನು ಮಾಡಿದ್ದೇನೆ. ಈ ವಿಷಯದಲ್ಲಿ ಮಧ್ಯಪ್ರವೇಶಿಸುವ ಯಾರ ಮೇಲೆಯೂ ಪ್ರತೀಕಾರ ತೆಗೆದುಕೊಳ್ಳುವ ಪ್ರತಿಜ್ಞೆ ಮಾಡುತ್ತೇನೆ” ಎಂದಿದ್ದಾರೆ.
ಅಲ್ಲದೇ ಉಕ್ರೇನ್ ಮಿಲಿಟರಿಗೆ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಅವರು ಕರೆ ನೀಡಿದ್ದಾರೆ.
ರಷ್ಯಾ ಸಂಸತ್ತಿನ ಮೇಲ್ಮನೆಯು ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲು ಮತ್ತು ಎರಡು ದೇಶಗಳ ನಡುವಿನ ಗಡಿಭಾಗದಲ್ಲಿ ಸೇನೆ ಜಮಾವಣೆ ಮಾಡಲು ಪುಟಿನ್ ಅವರಿಗೆ ಸಮ್ಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರು ಉಕ್ರೇನ್ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೂರ್ವ ಉಕ್ರೇನ್ನಲ್ಲಿನ ಬಂಡಾಯ ನಾಯಕರು ಉಕ್ರೇನ್ ವಿರುದ್ಧ ಮಿಲಿಟರಿ ಸಹಾಯಕ್ಕಾಗಿ ರಷ್ಯಾವನ್ನು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
ಈ ಮೂಲಕ ಯುದ್ಧವನ್ನು ತಪ್ಪಿಸಲು ಮತ್ತು ರಷ್ಯಾದ ಮೇಲೆ ಪಾಶ್ಚಿಮಾತ್ಯ ನಿರ್ಬಂಧಗಳನ್ನು ಹೇರಲು ನಡೆಸಿದ ರಾಜತಾಂತ್ರಿಕ ಮಾತುಕತೆ ವಿಫಲವಾಗಿದೆ









