ಅಮೋಲ್ ಮಜುಂದಾರ್… ದೇಶಿ ಕ್ರಿಕೆಟ್‍ನ ರನ್ ಮೆಷಿನ್. ದೇಸಿ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ರೂ ಟೀಮ್ ಇಂಡಿಯಾ ಪರ ಆಡದ ನತದೃಷ್ಟ ಪ್ರತಿಭಾವಂತ ಆಟಗಾರ. ಸಚಿನ್, ರಾಹುಲ್, ಲಕ್ಷ್ಮಣ್, ಗಂಗೂಲಿಯ ಅಬ್ಬರದ ನಡುವೆ ಅಮೋಲ್ ಮಜುಂದಾರ್‍ಗೆ ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶವೇ ಸಿಗಲಿಲ್ಲ. ಅಂತಹ ಮಜುಂದಾರ್ ಅವರನ್ನು ಟೀಮ್ ಇಂಡಿಯಾದ ಕೋಚ್ ರವಿಶಾಸ್ತ್ರಿ ಯಾಕೋ ಏನೋ ನೆನಪಿಸಿಕೊಂಡಿದ್ದಾರೆ.
ರವಿಶಾಸ್ತ್ರಿ ಅವರು ಸುಮಾರು 27 ವರ್ಷಗಳ ಹಳೆಯ ಫೋಟೋ ಒಂದನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದಾರೆ. ಅದ್ರಲ್ಲಿ ರವಿಶಾಸ್ತ್ರಿ ಅವರು ಅಮೋಲ್ ಮಜುಂದಾರ್ ಅವರನ್ನು ಬೆನ್ನು ತಟ್ಟುತ್ತಿದ್ದಾರೆ. ಆದ್ರೆ ಈ ಒಂದು ಫೋಟೊ ಅನೇಕ ವಿಷಯಗಳನ್ನು ತೆರೆದಿಡುತ್ತಿದೆ. ಅಲ್ಲದೆ ಅಮೋಲ್ ಮಜುಂದಾರ್ ಅವರನ್ನು ಟೀಮ್ ಇಂಡಿಯಾದ ಶ್ವೇತಬಣ್ಣದ ಉಡುಪಿನಲ್ಲಿ ನೋಡಲು ಆಗಲಿಲ್ಲ. ಮಜುಂದಾರ್ ಚೊಚ್ಚಲ ರಣಜಿ ಋತು ನನ್ನ ಕೊನೆಯ ರಣಜಿ ಋತುವಾಗಿತ್ತು ಅಂತ ರವಿಶಾಸ್ತ್ರಿ ಅವರು ಅಮೋಲ್ ಮಜುಂದಾರ್ ಅವರ ಪ್ರತಿಭೆಯನ್ನು ಶ್ಲಾಘನೆ ಮಾಡಿದ್ದಾರೆ.
ಅಮೋಲ್ ಮಜುಂದಾರ್ ಅವರು 1993-94ರ ಋತುವಿನಲ್ಲಿ ರಣಜಿ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಪಂದ್ಯದಲ್ಲೇ ಮಜುಂದಾರ್ ಅವರು ಆಕರ್ಷಕ 260 ರನ್ ಸಿಡಿಸಿದ್ದರು. ಹರಿಯಾಣ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಜುಂದಾರ್ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಟ್ವಿಟರ್‍ನಲ್ಲಿ ಅಮೋಲ್ ಮಜುಂದಾರ್, ರವಿಶಾಸ್ತ್ರಿ ಅವರು ನನ್ನ ಬಾಲ್ಯದ ಹೀರೋ ಆಗಿದ್ದರು. ನನ್ನ ಭುಜದ ಮೇಲೆ ಕೈಹಿಡಿದು ಬೆನ್ನುತಟ್ಟಿರುವುದು ನನಗೆ ಇನ್ನೂ ನೆನಪು ಇದೆ. 1993-94ರಲ್ಲಿ ವಾಂಖೇಡೆ ಮೈದಾನದಲ್ಲಿ ನಾವು ರಣಜಿ ಟ್ರೋಫಿ ಗೆದ್ದಿದ್ದೇವು. ಆಗ ವೆಲ್ ಡನ್ ಯಂಗ್ ಮ್ಯಾನ್ ಅಂತ ಹೇಳಿರುವುದನ್ನು ನಾನು ಎಂದೆಂದೂ ನೆನಪಿಸಿಕೊಳ್ಳುತ್ತೇನೆ ಅಂತ ಪ್ರತಿಕ್ರಿಯಿಸಿದ್ದಾರೆ.
45ರ ಹರೆಯದ ಅಮೋಲ್ ಮಜುಂದಾರ್ ಅವರು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದಾರೆ. ಈ ಹಿಂದೆ ನೆದರ್ಲೆಂಡ್ ಮತ್ತು ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೂ ತರಬೇತಿ ನೀಡಿದ್ದರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಭಾರತ 19 ಮತ್ತು 23 ವಯೋಮಿತಿಯ ತಂಡಕ್ಕೂ ತರಬೇತುದಾರನಾಗಿರುವ ಅಮೋಲ್ ಮಜುಂದಾರ್ ಅವರು, 171 ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 11,167 ರನ್ ಗಳಿಸಿದ್ದರು. ಇದ್ರಲ್ಲಿ 30 ಶತಕ ಹಾಗೂ 60 ಅರ್ಧಶತಕಗಳಿವೆ.








