Mohammed Shami : ನನ್ನನ್ನು ಟೀಕಿಸಿದವರು ಭಾರತೀಯರೇ ಅಲ್ಲ…
ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದ್ದು ಗೊತ್ತೇ ಇದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್‌ಗಳಿಂದ ಹೀನಾಯ ಸೋಲುಂಡು ಅತ್ಯಂತ ಹೀನಾಯವಾಗಿ ಟೀಕೆಗೆ ಗುರಿಯಾಗಿತ್ತು. ಈ ಪಂದ್ಯದಲ್ಲಿ ಶಮಿ 3.5 ಓವರ್ ಬೌಲ್ ಮಾಡಿ 43 ರನ್ ನೀಡಿದ್ದರು. ಈ ಸೋಲಿಗೆ ವೇಗಿ ಮೊಹಮ್ಮದ್ ಶಮಿ ಕಾರಣ ಎಂದು ಆರೋಪಿಸಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದರು. ಈ ಸಂದರ್ಭದಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್ ಮತ್ತು ಇರ್ಫಾನ್ ಪಠಾಣ್ ಸೇರಿದಂತೆ ಹಲವು ಶಮಿ ಪರ ನಿಂತಿದ್ದರು.
ಇದೀಗ ಆ ಟ್ರೋಲ್, ಟೀಕೆಗಳಿಗೆ ಮೊಹ್ಮದ್ ಶಮಿ ಪ್ರತಿಕ್ರಿಯೆ ನೀಡಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಶಮಿ , “ಒಳ್ಳೆಯ ಪ್ರದರ್ಶನ ನೀಡಿದರೆ ಹೀರೋ ಎನ್ನುತ್ತಾರೆ, ಒಂದೇ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದರೆ ಝೀರೋ ಎನ್ನುತ್ತಾರೆ. ಹೀಗೆ ಒಬ್ಬ ಆಟಗಾರರನ್ನ ಹೀರೋ ಆಗಿ ನೋಡಿ, ಮತ್ತೆ ಅದೇ ಆಟಗಾರನ ಮೇಲೆ ಆರೋಪಿಸಿದ್ರೆ, ಅವರು ಭಾರತೀಯರೇ ಅಲ್ಲ ಎಂದಿದ್ದಾರೆ.

ನನ್ನ ಬಗ್ಗೆ ಯಾರಾದರೂ ನೋವುಂಟು ಮಾಡುವ ಮಾತುಗಳನ್ನು ಹೇಳಿದರೆ ಅವರು ನನ್ನ ಅಥವಾ ಭಾರತ ತಂಡದ ಅಭಿಮಾನಿಯಲ್ಲ. ಅಂತಹ ಸಂದರ್ಭಗಳಲ್ಲಿ ಏನು ಮಾಡಬೇಕೆಂದು ನನಗೆ ತಿಳಿದಿದೆ. ಭಾರತ ಎಂದರೆ ಏನು ಎಂದು ನಾವು ಹೇಳಬೇಕಾಗಿಲ್ಲ. ನಾವು ದೇಶವನ್ನು ಪ್ರತಿನಿಧಿಸುತ್ತೇವೆ. ನಾವು ದೇಶಕ್ಕಾಗಿ ಹೋರಾಡುತ್ತಿದ್ದೇವೆ. ಹಾಗಾಗಿ ಇಂತಹ ಟ್ರೋಲ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದಿದ್ದಾರೆ ಶಮಿ.
ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ 57 ಟೆಸ್ಟ್ ಪಂದ್ಯಗಳಲ್ಲಿ 209 ವಿಕೆಟ್, 79 ಏಕದಿನ ಪಂದ್ಯಗಳಲ್ಲಿ 148 ವಿಕೆಟ್ ಹಾಗೂ ಟಿ20ಯಲ್ಲಿ 18 ವಿಕೆಟ್ ಪಡೆದಿದ್ದಾರೆ.








