ಅವನು…!
ಸೋಲಿನ ನೆರಳಿನಲ್ಲೂ ಗೆಲುವಿನ ಚಿತ್ತಾರ ಬಿಡಿಸುವ ಕ್ರಿಕೆಟ್ ಜಗತ್ತಿನ ವಿಶ್ವಕರ್ಮ…
ಯಾಕಂದ್ರೆ ಅವನು..!
ಕ್ರಿಕೆಟ್ ಅಭಿಮಾನಿಗಳ ಹೃದಯ ಏರುಪೇರು ಆದಾಗ ಮುಖದಲ್ಲಿ ಸಂಭ್ರಮ ಮೂಡಿಸುವ ಮಹಾದೇವ. ತೀಕ್ಷ್ಣವಾದ ನೋಟದಿಂದಲೇ ಬೌಲರ್ಗಳನ್ನು ಘಾಸಿಗೊಳಿಸುವ ಮುಕ್ಕಣ್ಣ. 22 ಯಾರ್ಡ್ ಪಿಚ್ನಲ್ಲಿ ತಾಂಡವ ನೃತ್ಯದಂತೆ ಬ್ಯಾಟ್ ಬೀಸುವ ನಟರಾಜ. ಮೈದಾನದಲ್ಲಿ ಎದುರಾಳಿಗಳ ಮೇಲೆ ಕ್ರೋಧಾಗ್ನಿ ಉಗುಳುವ ಕಾಲಭೈರವ. ಸದಾ ತಂಡದ ಹಿತ ಕಾಯುವ ವೀರಭದ್ರ. ಪಂದ್ಯದ ನಡುವೆಯೂ ಸಹ ಆಟಗಾರರ ಜೊತೆ ತುಂಟಾಟವಾಡುವ ಭೋಲೇನಾಥ. ದಾಖಲೆಗಳ ಮೇಲೆ ದಾಖಲೆ ಬರೆದಿರುವ, ಬರೆಯುತ್ತಿರುವ ವಿಶ್ವನಾಥ. ಕುಟುಂಬದ ಪಾಲಿಗೆ ಪ್ರೀತಿಯ ಉಮಾಪತಿ.
ಅಷ್ಟೇ ಅಲ್ಲ ಅವನು…
ಆಟದ ಹಣೆಬರಹವನ್ನೇ ಬದಲಿಸುವ ಕ್ರಿಕೆಟ್ ಜಗತ್ತಿನ ವಿಧಾತ. ಮೂರು ಮಾದರಿಯ ಕ್ರಿಕೆಟ್ನಲ್ಲೂ ಅಪ್ರತಿಮ ಸಾಧನೆ ಮಾಡಿರುವ ತ್ರಿವಿಕ್ರಮ. ಶಿಸ್ತು, ಬದ್ಧತೆ, ಹೋರಾಟ, ಧೈರ್ಯ, ತ್ಯಾಗ, ತಾಳ್ಮೆ, ಏಕಾಗ್ರತೆ, ದೃಢ ಸಂಕಲ್ಪ, ಅಚಲ ನಿರ್ಧಾರ, ಆತ್ಮವಿಶ್ವಾಸ ಹೀಗೆ ದಶಗುಣಗಳನ್ನು ಮೈಗೂಡಿಸಿಕೊಂಡಿರುವ ಮಹಾಯೋಗಿ.
ಇವತ್ತು (ನವೆಂಬರ್ 5) ಅವನ ಹುಟ್ಟುಹಬ್ಬ.
ಅವನ ಹೆಸರು..
ಅಪ್ಪ – ಅಮ್ಮ ಪ್ರೀತಿಯಿಂದ ಇಟ್ಟ ಹೆಸರು ವಿರಾಟ್.. ವಿರಾಟ್ ಕೊಹ್ಲಿ..!
ಬಾಲ್ಯದ ಕೋಚ್ ಮುದ್ದಿನಿಂದ ಚೀಕು ಅಂತ ಕರೆಯುತ್ತಿದ್ದರು.
ಆ ಚೀಕು ಇಂದು ಕೋಟ್ಯಂತರ ಅಭಿಮಾನಿಗಳ ಪಾಲಿನ ಕ್ರಿಕೆಟ್ ಸಾಮ್ರಾಟ. ತುಂಟಾಟ, ಒರಟು ಸ್ವಭಾವದಿಂದಲೇ ಶುರುವಾದ ಕ್ರಿಕೆಟ್ ಪಯಣ ಇಂದು ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣ ಅಧ್ಯಾಯವಾಗಿ ರೂಪುಗೊಂಡಿದೆ.
ಅದು 18 ವರ್ಷಗಳ ಸುದೀರ್ಘ ಕ್ರಿಕೆಟ್ ಪಯಣ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪ್ರವೇಶಿಸುವ ಮುನ್ನವೇ ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್ ಉತ್ತರಾಧಿಕಾರಿ ಎಂದು ವಿರಾಟ್ ಹೆಸರಿಗೆ ಅಂಟಿಕೊಂಡಿತ್ತು. ಆದ್ರೆ ಐಪಿಎಲ್ ಅಮಲು ವಿರಾಟ್ ತಲೆಯನ್ನು ಗಿರ್ರನೆ ಸುತ್ತುವಂತೆ ಮಾಡಿತ್ತು. ಅಷ್ಟರಲ್ಲೇ ಹಿರಿಯ ಆಟಗಾರರು ವಿರಾಟ್ಗೆ ಸರಿಯಾದ ದಾರಿಯಲ್ಲಿ ನಡೆಯುವಂತೆ ಕಿವಿಮಾತು ಹೇಳಿದ್ರು. ಅಷ್ಟೇ.. ನಂತರ ಹಿಂತಿರುಗಿ ನೋಡಲೇ ಇಲ್ಲ. ಸಿಕ್ಕ ಅವಕಾಶವನ್ನು ಬಳಸಿಕೊಂಡ ವಿರಾಟ್, ವಿಶ್ವ ಕ್ರಿಕೆಟ್ಗೆ ವಿರಾಟ ರೂಪವನ್ನೇ ಪ್ರದರ್ಶಿಸಿದ್ದಾನೆ.
ಶತಕಗಳ ಸರಮಾಲೆ, ದಾಖಲೆಗಳ ಮಹಾಪೂರ, ಗೆಲುವಿನ ನಾಗಾಲೋಟ.. ಸೋಲುಗಳ ಕಹಿ ಅನುಭವ, ಕಣ್ಣೀರು, ಮೈದಾನದಲ್ಲಿ ಕಿರಿಕಿರಿ, ಅಪಮಾನ, ಅತಿರೇಕದ ವರ್ತನೆಯಿಂದ ಟೀಕೆಗಳು ಹೀಗೆ ಎಲ್ಲವನ್ನೂ ಅನುಭವಿಸಿರುವ ವಿರಾಟ್ ಕೊಹ್ಲಿಯ ಬ್ಯಾಟ್ ಮಾತ್ರ ಇನ್ನೂ ಸದ್ದು ಮಾಡುತ್ತಲೇ ಇದೆ.
ಟಿ-20 ಕ್ರಿಕೆಟ್ನಿಂದ ಅಚ್ಚರಿಯ ನಿವೃತ್ತಿ, ಟೆಸ್ಟ್ ಕ್ರಿಕೆಟ್ಗೆ ಒಲ್ಲದ ಮನಸ್ಸಿನಿಂದಲೇ ವಿದಾಯ ಹೇಳಿರುವ ವಿರಾಟ್ 2027ರ ವಿಶ್ವಕಪ್ ನಲ್ಲಿ ಆಡುವ ಬಯಕೆ ಹೊಂದಿದ್ದಾನೆ. ಎರಡನೇ ಬಾರಿ ಏಕದಿನ ವಿಶ್ವಕಪ್ ಗೆಲ್ಲಬೇಕು ಎಂಬ ಹಂಬಲವಂತೂ ಇದ್ದೇ ಇದೆ. ಆದ್ರೂ ಈ 18 ವರ್ಷಗಳ ಪಯಣದಲ್ಲಿ ತನಗೆ ಗೊತ್ತಿಲ್ಲದ ಹಾಗೇ ತನ್ನ ಹೆಸರಿಗೆ ಅಂಟಿಕೊಂಡಿರುವ ಹೆಸರುಗಳ ಪಟ್ಟಿಯೇ ಒಂದೊಂದು ಅಧ್ಯಾಯದ ಪುಟಗಳಾಗಿವೆ.
ಮೂರು ಮಾದರಿಯ ಕ್ರಿಕೆಟ್ನಲ್ಲಿ ರನ್ ಗಳಿಸುವ ಪರಿಗೆ ರನ್ ಮೆಷಿನ್ ಅಂತ ಕರೆಯಲಾಗುತ್ತದೆ. ಶತಕಗಳ ದಾಖಲೆಗೆ ಕಿಂಗ್ ಕೊಹ್ಲಿ. ರನ್ ದಾಖಲೆಗಳಿಗೆ ಕ್ರಿಕೆಟ್ ಸಾಮ್ರಾಟ. ಗುರಿ ಬೆನ್ನಟ್ಟುವ ಹೋರಾಟಕ್ಕೆ ಚೇಸ್ ಮಾಸ್ಟರ್. ಎದುರಾಳಿ ತಂಡದ ಗೇಮ್ ಪ್ಲಾನ್ಗಳನ್ನು ಬುಡಮೇಲು ಮಾಡುವುದಕ್ಕೆ ಕಿಂಗ್ ಆಫ್ ಚೇಸ್. ಆಧುನಿಕ ಕ್ರಿಕೆಟ್ನಲ್ಲಿ ಸುದೀರ್ಘ ಕಾಲ ಛಾಪು ಮೂಡಿಸಿರುವ ಮಾಡರ್ನ್ ಮಾಸ್ಟರ್ ಕೂಡ ಹೌದು.
ಹ್ಯಾಪಿ ಬರ್ತ್ ಡೇ ಚೀಕು..
ಸನತ್ ರೈ








