ಬೆಂಗಳೂರು: ರಾಜಧಾನಿಯ ಐಟಿ ಮತ್ತು ಬಿಟಿ ವಲಯದಲ್ಲಿ ಸ್ಥಳೀಯ ಕನ್ನಡಿಗರಿಗೆ ನ್ಯಾಯಯುತ ಉದ್ಯೋಗಾವಕಾಶ ಕಲ್ಪಿಸಬೇಕೆಂಬ ಕೂಗು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಈ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಶಾಂತಿಯುತ ಹೋರಾಟದ ಕುರಿತು ತಮಿಳುನಾಡು ಕೇಡರ್‌ನ ಐಪಿಎಸ್ ಅಧಿಕಾರಿಯೊಬ್ಬರು ಕೀಳುಮಟ್ಟದ ವ್ಯಂಗ್ಯವಾಡುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ್ದಾರೆ. ಆದರೆ, ಕನ್ನಡಿಗರ ಸಂಘಟಿತ ಆಕ್ರೋಶದ ಬಿಸಿಗೆ ಬೆಚ್ಚಿಬಿದ್ದ ಅಧಿಕಾರಿ ಕೊನೆಗೆ ತಮ್ಮ ವಿವಾದಾತ್ಮಕ ಪೋಸ್ಟ್ ಅನ್ನೇ ಅಳಿಸಿಹಾಕಿ ಮುಖಭಂಗ ಅನುಭವಿಸಿದ್ದಾರೆ.
ರಾಜ್ಯದಲ್ಲಿದ್ದುಕೊಂಡೇ ಕನ್ನಡಿಗರಿಗೆ ಉದ್ಯೋಗ ನೀಡಲು ನಿರಾಕರಿಸುತ್ತಿರುವ ಹಾಗೂ ಕನ್ನಡಿಗರ ರೆಸ್ಯೂಮ್‌ಗಳನ್ನು ಕಸದ ಬುಟ್ಟಿಗೆ ಎಸೆಯುತ್ತಿರುವ ಐಟಿ ಬಿಟಿ ಕಂಪನಿಗಳ ಧೋರಣೆ ವಿರುದ್ಧ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಸ್ವತಃ ರಾಜ್ಯ ಸರ್ಕಾರವೇ ಸ್ಥಳೀಯ ಅರ್ಹರಿಗೆ ಕೆಲಸ ನೀಡುವಂತೆ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದರ ಬೆನ್ನಲ್ಲೇ, ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರ ನೇತೃತ್ವದಲ್ಲಿ ನವೆಂಬರ್ ತಿಂಗಳು ಪೂರ್ತಿ ಹತ್ತು ವಿಶೇಷ ತಂಡಗಳ ಮೂಲಕ ಬೃಹತ್ ಆಗ್ರಹ ಅಭಿಯಾನವನ್ನು ಆರಂಭಿಸಲಾಗಿದೆ. ಇಂತಹ ಸದುದ್ದೇಶದ ಹಾಗೂ ಶಾಂತಿಯುತ ಅಭಿಯಾನದ ಬಗ್ಗೆ ತಮಿಳುನಾಡಿನ ಐಪಿಎಸ್ ಅಧಿಕಾರಿ ಬಿ.ಎಸ್. ಧನುಷ್ ಕುಮಾರ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಹಗುರವಾಗಿ ಪ್ರತಿಕ್ರಿಯಿಸಿ ವಿವಾದದ ಕಿಡಿ ಹೊತ್ತಿಸಿದ್ದರು.
ಕರವೇ ಅಭಿಯಾನದ ಕುರಿತಾದ ಪೋಸ್ಟ್ ಒಂದಕ್ಕೆ ಪ್ರತಿಕ್ರಿಯಿಸಿದ್ದ ಐಪಿಎಸ್ ಅಧಿಕಾರಿ ಧನುಷ್ ಕುಮಾರ್, ಕೆಲಸವಿಲ್ಲದ ನಿರುದ್ಯೋಗಿಗಳು ಕೆಲಸ ಮಾಡುತ್ತಿರುವವರ ಕಾರ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕರವೇ ಕಾರ್ಯಕರ್ತರನ್ನು ನಿರುದ್ಯೋಗಿಗಳು ಎಂಬಂತೆ ಹೀಯಾಳಿಸಿದ್ದರು. ಜವಾಬ್ದಾರಿಯುತ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರ ಈ ಬಾಲಿಶ ಹಾಗೂ ಉದ್ಧಟತನದ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ.
ತಮ್ಮದೇ ನೆಲದಲ್ಲಿ ಕನ್ನಡಿಗರಿಗೆ ಅನ್ಯಾಯವಾದಾಗ ಧ್ವನಿ ಎತ್ತುವುದು ನಮ್ಮ ಹಕ್ಕು. ಶಾಂತಿಯುತವಾಗಿ ನಡೆಯುತ್ತಿರುವ ನಮ್ಮ ಹೋರಾಟವನ್ನು ಪ್ರಶ್ನಿಸಲು ನೆರೆರಾಜ್ಯದ ಅಧಿಕಾರಿಗೆ ಏನು ನೈತಿಕತೆಯಿದೆ ಎಂದು ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಐಟಿ ಉದ್ಯಮಿ ಅರುಣ್ ಜಾವಗಲ್ ಅವರು, ನಮ್ಮ ರಾಜ್ಯದ ಕಂಪನಿಗಳಲ್ಲಿ ಕನ್ನಡಿಗರ ನೇಮಕಾತಿ ಕುರಿತು ಮಾಹಿತಿ ಕೇಳುವುದು ಕೆಲಸಕ್ಕೆ ಅಡ್ಡಿಪಡಿಸಿದಂತಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಕರ್ನಾಟಕದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಲು ಅನ್ಯರಾಜ್ಯದ ಅಧಿಕಾರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಗುಡುಗಿರುವ ಅವರು, ತಮ್ಮ ಎಕ್ಸ್ ಪೋಸ್ಟ್ ಅನ್ನು ನೇರವಾಗಿ ತಮಿಳುನಾಡು ಸಿಎಂ ವಿಜಯ್ ಅವರಿಗೆ ಟ್ಯಾಗ್ ಮಾಡುವ ಮೂಲಕ ಅಧಿಕಾರಿಯ ವರ್ತನೆಯನ್ನು ಪ್ರಶ್ನಿಸಿದ್ದಾರೆ. ಕನ್ನಡಿಗರ ಸಾಲು ಸಾಲು ತಿರುಗೇಟುಗಳಿಂದ ಕಂಗಾಲಾದ ಅಧಿಕಾರಿ ಧನುಷ್ ಕುಮಾರ್ ಸದ್ದಿಲ್ಲದೆ ತಮ್ಮ ಕಾಮೆಂಟ್ ಡಿಲೀಟ್ ಮಾಡಿ ಕಾಲ್ಕಿತ್ತಿದ್ದಾರೆ.
ರಾಜ್ಯೋತ್ಸವದ ಮಾಸವಾದ ನವೆಂಬರ್ ತಿಂಗಳಿಡೀ ಕರವೇ ನಿಯೋಗವು ಬೆಂಗಳೂರಿನ ವಿವಿಧ ಐಟಿ ಮತ್ತು ಬಿಟಿ ಕಂಪನಿಗಳಿಗೆ ಖುದ್ದು ಭೇಟಿ ನೀಡಲಿದೆ. ಅಲ್ಲಿನ ಮುಖ್ಯಸ್ಥರು ಹಾಗೂ ಎಚ್ಆರ್ ಅಧಿಕಾರಿಗಳನ್ನು ಭೇಟಿ ಮಾಡಿ, ಸಂಸ್ಥೆಯಲ್ಲಿರುವ ಕನ್ನಡಿಗರ ಉದ್ಯೋಗ ಪ್ರಮಾಣದ ನಿಖರ ದತ್ತಾಂಶವನ್ನು ಸಂಗ್ರಹಿಸಲಿದೆ. ಜೊತೆಗೆ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡದ ಉದ್ಯೋಗಿಗಳ ಯೋಗಕ್ಷೇಮವನ್ನೂ ವಿಚಾರಿಸಲಿದೆ. ಅಭಿಯಾನದ ಅಂತ್ಯಕ್ಕೆ ಈ ಎಲ್ಲಾ ಅಧಿಕೃತ ಮಾಹಿತಿಗಳನ್ನು ಕ್ರೋಢೀಕರಿಸಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸಲ್ಲಿಸಲಾಗುತ್ತದೆ. ತನ್ಮೂಲಕ ರಾಜ್ಯದ ಎಲ್ಲಾ ವಲಯಗಳಲ್ಲೂ ಕನ್ನಡಿಗರಿಗೆ ನ್ಯಾಯಸಮ್ಮತ ಉದ್ಯೋಗದ ಪಾಲು ಸಿಗುವಂತೆ ಮತ್ತು ಸ್ಥಳೀಯರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ಕಠಿಣ ನಿಯಮಗಳನ್ನು ರೂಪಿಸಲು ಸರ್ಕಾರವನ್ನು ಒತ್ತಾಯಿಸುವುದು ಈ ಅಭಿಯಾನದ ಪ್ರಮುಖ ಗುರಿಯಾಗಿದೆ.







