ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಸಾಮಥ್ರ್ಯದ ಹಿಂದೆ ದೇವರ ವರವೂ ಇದೆ. ಹಾಗಾಗಿಯೇ ಧೋನಿ ಒಬ್ಬ ಅತ್ಯುತ್ತಮ ನಾಯಕನಾಗಿರುವುದು ಎಂದು ಟೀಮ್ ಇಂಡಿಯಾದ ಎಡಗೈ ಬ್ಯಾಟ್ಸ್ ಮೆನ್ ಸುರೇಶ್ ರೈನಾ ಹೇಳಿದ್ದಾರೆ.
ನನಗೆ ಗೊತ್ತಿದೆ… ಧೋನಿ ಯಾವಾಗಲೂ ನಮಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ. ವಿಕೆಟ್ ಹಿಂದುಗಡೆ ತನ್ನ ಕಾಯಕವನ್ನು ಮಾಡುತ್ತಿರುವ ಧೋನಿಗೆ ಇಡೀ ಪಂದ್ಯದ ಗತಿಯನ್ನು ಅರಿತುಕೊಳ್ಳುವ ವಿಶೇಷ ಸಾಮಥ್ರ್ಯವನ್ನು ಮೈಗೂಡಿಸಿಕೊಂಡಿದ್ದಾರೆ. ಪ್ರೇಕ್ಷಕರ ವರ್ತನೆ, ಪಿಚ್ ಯಾವ ರೀತಿ ಪ್ರತಿಕ್ರಿಯಿಸುತ್ತದೆ, ಬ್ಯಾಟ್ಸ್ ಮೆನ್ ಯಾವ ರೀತಿ ಆಡುತ್ತಾನೆ, ಹೀಗೆ ಎಲ್ಲವನ್ನೂ ಧೋನಿ ಸೂಕ್ಷ್ಮವಾಗಿ ತಿಳಿದುಕೊಳ್ಳುತ್ತಾರೆ. ಹೀಗಾಗಿ ಅವರ ನಿರ್ಧಾರ ತಪ್ಪಾಗುವುದು ತುಂಬಾನೇ ಕಡಿಮೆ. ನಿಜವಾಗಿಯೂ ಧೋನಿಗೆ ದೇವರ ವರವಿದೆ. ಹಾಗಾಗಿಯೇ ಅವರು ವಿಶ್ವ ಕ್ರಿಕೆಟ್‍ನಲ್ಲಿ ಶ್ರೇಷ್ಠ ನಾಯಕನಾಗಿ ಹೊರಹೊಮ್ಮಿರುವುದು ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ.
ಬ್ಯಾಟಂಗ್ ಆರ್ಡರ್ ನಲ್ಲಿ ಬದಲಾವಣೆ ಮಾಡುತ್ತಿರುವಾಗ ನಾನು ಧೋನಿಯನ್ನು ಯಾವತ್ತೂ ಪ್ರಶ್ನೆ ಮಾಡಿಲ್ಲ. ನನಗೆ ನೆನಪಿದೆ… 2015ರ ವಿಶ್ವಕಪ್‍ನ ಪಂದ್ಯವೊಂದರಲ್ಲಿ ನನಗೆ ಬ್ಯಾಟಿಂಗ್ ಆರ್ಡರ್ ನಲ್ಲಿ ಬಡ್ತಿಯನ್ನು ಕೊಟ್ಟಿದ್ದರು. ಆ ಪಂದ್ಯದಲ್ಲಿ 70-80 ರನ್ ದಾಖಲಿಸಿದ್ದೆ. ಆದ್ರೆ ನಾನು ಆಗ ಅವರಲ್ಲಿ ಕೇಳಲಿಲ್ಲ. ಆ ನಂತರ ನನಗೆ ಯಾಕೆ ಬ್ಯಾಟಿಂಗ್ ನಲ್ಲಿ ಬಡ್ತಿ ಕೊಟ್ರಿ ಅಂತ ಕೇಳಿದ್ದೆ. ಅದಕ್ಕೆ ಧೋನಿ ಹೇಳಿದ್ದು ಹೀಗೆ… ಎದುರಾಳಿ ತಂಡದಲ್ಲಿ ಇಬ್ಬರು ಲೆಗ್ ಸ್ಪಿನ್ನರ್‍ಗಳು ಬೌಲಿಂಗ್ ಮಾಡುತ್ತಿದ್ದರು ಎಂದರು. ಅವರಿಗೆ ಗೊತ್ತಿತ್ತು ನಾನು ಲೆಗ್ ಸ್ಪಿನ್ನರ್‍ಗಳ ವಿರುದ್ಧ ಚೆನ್ನಾಗಿ ಆಡುತ್ತೇನೆ ಎಂದು. ಹೀಗೆ ಧೋನಿಯ ನಾಯಕತ್ವದ ಗುಣಗಳನ್ನು ರೈನಾ ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡರು.








