ಬೆಂಗಳೂರು, ಮೇ 23 : ರಾಮೇಶ್ವರಕ್ಕೆ ಹೋದ್ರು ಶನೇಶ್ವರನ ಕಾಟ ತಪ್ಪಲಿಲ್ಲ ಎಂಬಂತಾಗಿದೆ ಸದ್ಯ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರ ಪರಿಸ್ಥಿತಿ. ಕಾಂಗ್ರೆಸ್ ಕಟ್ಟಪ್ಪ ಡಿ.ಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿ ಸುಮಾರು ಎರಡೂವರೆ ತಿಂಗಳೇ ಕಳೆದಿದೆ. ಆದರೆ, ಈವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿಲ್ಲ ಡಿಕೆಶಿ.
ಬೃಹತ್ ಸಮಾರಂಭದ ಮೂಲಕ ಅಧಿಕಾರ ಸ್ವೀಕರಿಸಬೇಕೆಂದುಕೊಂಡಿದ್ದ ಶಿವಕುಮಾರ್ ಕನಸಿಗೆ ಕೊರೊನಾ ಫುಲ್ ಸ್ಟಾಪ್ ಇಟ್ಟಿದೆ. ಕೊರೊನಾ ಲಾಕ್ ಡೌನ್ ಕಾರಣದಿಂದಾಗಿ ಕನಕಪುರ ಬಂಡೆಯ ಪಟ್ಟಾಭಿಷೇಕ ಸಮಾರಂಭ ಮುಂದಕ್ಕೆ ಹೋಗುತ್ತಲೇ ಇದೆ.
ಇದೀಗ ಮತ್ತೆ ಟ್ರಬಲ್ ಶೂಟರ್ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಜೂನ್ 7 ರಂದು ಡಿಕೆ ಶಿವಕುಮಾರ್ ನೂತನ ಕಾಂಗ್ರೆಸ್ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಈ ವಿಷಯವನ್ನು ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ನಿಗಮ ಮಂಡಳಿಗಳ ಮಾಜಿ ಅಧ್ಯಕ್ಷರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಂಚಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಮೇ 31ಕ್ಕೆ ಪದಗ್ರಹಣ ಕಾರ್ಯಕ್ರಮ ಮಾಡುವ ಆಲೋಚನೆ ಇತ್ತು. ಆದರೆ ಲಾಕ್ ಡೌನ್ ಮೇ 31ರವರೆಗೂ ಇರುವುದರಿಂದ ಪದಗ್ರಹಣ ಕಾರ್ಯಕ್ರಮ ಮುಂದೂಡಲಾಯಿತು. ಈಗ ಜೂನ್ 7ಕ್ಕೆ ನಿಗದಿ ಮಾಡಲಾಗಿದೆ.
ಕೈ ಕಾರ್ಯಕರ್ತರಿಗೆ ಸೂಚನೆ
ನಿಗಮ ಮಂಡಳಿಗಳ ಮಾಜಿ ಅಧ್ಯಕ್ಷರ ಸಭೆಯಲ್ಲಿ ಪದಗ್ರಹಣದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಟ್ರಬಲ್ ಶೂಟರ್, ಕಾಂಗ್ರೆಸ್ ಕಾರ್ಯಕರ್ತರಿಗೆ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳುವಂತೆ ಕೆಲ ಸೂಚನೆಗಳನ್ನೂ ಸಹ ಕೊಟ್ಟಿದ್ದಾರಂತೆ. ಜೊತೆಗೆ ಪ್ರತಿಯೊಂದು ಗ್ರಾಮದಲ್ಲೂ ಪದಗ್ರಹಣ ಕಾರ್ಯಕ್ರಮ ವೀಕ್ಷಣೆ ಮಾಡುವುದಕ್ಕೆ ಟಿವಿ ಅಳವಡಿಸುವುದು. ಸಾರ್ವಜನಿಕ ಪ್ರದೇಶದಲ್ಲಿ ಟಿವಿ ಗಳನ್ನು ಅಳವಡಿಸಿ ಪಕ್ಷದ ಕಾರ್ಯಕರ್ತರು ತಾವು ಇರುವ ಸ್ಥಳದಲ್ಲಿ ಅಂತರ ಕಾಯ್ದುಕೊಂಡು ಭಾಗವಹಿಸಲು ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.








