ಬೆಂಗಳೂರು, ಮೇ 23 : ಕೊರೋನಾ ಸೋಂಕು 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಲ್ಲಿ ಮತ್ತು 9 ವರ್ಷಕ್ಕಿಂತ ಸಣ್ಣ ವಯಸ್ಸಿನ ಮಕ್ಕಳಲ್ಲಿ ಬೇಗನೆ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತಿತ್ತು. ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಅವರಿಗೆ ಸೋಂಕು ಬೇಗ ಹರಡುವ ಸಾಧ್ಯತೆ ಹೆಚ್ಚು ಎಂದು, ಅವರು ಕೊರೊನಾ ಭೀತಿಯ ಈ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬರಬಾರದೆಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿತ್ತು. ಅಲ್ಲದೆ ಹಲವು ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಲು ಸೂಚಿಸಲಾಗಿತ್ತು.
ಆದರೆ ಇದೀಗ ಆತಂಕಕಾರಿ ಸುದ್ದಿಯೊಂದು ಹೊರ ಬಿದ್ದಿದ್ದು, ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಯುವಕರಿಗೆ ಹರಡುವುದು ಎಂದು ಸಂಶೋಧನಾ ವರದಿ ತಿಳಿಸಿದೆ.
ಡಾ. ವಿಶಾಲ್ ರಾವ್ ಮತ್ತು ಸುಬ್ರಮಣಿಯನ್ ಶ್ರೀಲಾಲ್ ಎನ್ನುವವರು ಕೈಗೊಂಡ ಸಂಶೋಧನೆಯ ವರದಿಯ ಪ್ರಕಾರ 20 ರಿಂದ 49 ವರ್ಷ ವಯಸ್ಸಿನವರಲ್ಲಿ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತದೆ ಎಂಬ ಅಂಶ ಬಯಲಾಗಿದೆ.
ಡಾ. ವಿಶಾಲ್ ರಾವ್ ಮತ್ತು ಸುಬ್ರಮಣಿಯನ್ ಶ್ರೀಲಾಲ್ ಅವರು ಕೈಗೊಂಡ ಸಂಶೋಧನೆಯ ಅಂಕಿ ಅಂಶಗಳು ಹೀಗಿವೆ :
ಕರ್ನಾಟಕದಲ್ಲಿ ಒಟ್ಟು ಕೊರೊನಾ ಸೋಂಕಿತರಲ್ಲಿ ಶೇಕಡಾ 60 ರಷ್ಟು ಜನರು 20 ರಿಂದ 49 ವರ್ಷ ಪ್ರಾಯದವರು. ಅವರಲ್ಲಿ ಶೇಕಡಾ 45 ರಷ್ಟು ಜನರು 20 ರಿಂದ 39 ವರ್ಷ ಪ್ರಾಯದವರು.
ಗುಣಮುಖರಾಗುತ್ತಿರುವವರಲ್ಲಿ ಕೂಡ ಈ ಪ್ರಾಯದವರೇ ಹೆಚ್ಚು. ಇವರು ಅಂದಾಜು 17.5 ದಿನಗಳಲ್ಲಿ ಗುಣಮುಖರಾಗಿದ್ದಾರೆ.
50 ರಿಂದ 59 ವರ್ಷ ಪ್ರಾಯದವರಲ್ಲಿ ಶೇಕಡಾ 10 ರಷ್ಟು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಶೆಕಡಾ 23 ರಷ್ಟು ಮಂದಿ, 19.5 ದಿನಗಳಲ್ಲಿ ಗುಣಮುಖರಾಗುತ್ತಿದ್ದಾರೆ.








