ಕಲಬುರಗಿ : ಕೊರೊನಾ ವಿರುದ್ಧದ ಹೋರಾಟದಲ್ಲಿ ತಮ್ಮ ಪ್ರಾಣವನ್ನೇ ಲೆಕ್ಕಿಸದೇ ಸೇವೆ ಮಾಡುತ್ತಿರುವ ಕೊರೊನಾ ಯೋಧರಿಗೆ ಇಡೀ ವಿಶ್ವವೇ ಸಲಾಂ ಎನ್ನುತ್ತಿದೆ. ಈ ಮಧ್ಯೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಿಣ್ಣಿ ಅಬ್ಬಾಸ್ ಗ್ರಾಮದಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ವ್ಯಕ್ತಿಯೊಬ್ಬ ಕೊರೊನಾ ವಾರಿಯರ್ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿದ್ದಾನೆ. ರೇಣುಕಾ ಕುಡಕಿ ಗಾಯಗೊಂಡ ಆಶಾ ಕಾರ್ಯಕರ್ತೆಯಾಗಿದ್ದು, ಅವರ ಕೈ ಮುರಿದು ಆಳಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೇಣುಕಾ ಅವರ ಸೋಮನಾಥ್ ಕಾಂಬಳೆ ಎಂಬಾತ ಹಲ್ಲೆ ಮಾಡಿದ್ದಾನೆ. ಕೆಲ ದಿನಗಳಿಂದೆ ಮುಂಬೈನಿಂದ ಬಂದಿದ್ದ ಸೋಮನಾಥ್ ನನ್ನು, ರೇಣುಕಾ ಗ್ರಾಮದ ಸರ್ಕಾರಿ ಶಾಲೆಯ ಕ್ವಾರಂಟೈನ್ ಕೇಂದ್ರಕ್ಕೆ ಸೇರಿಸಿದ್ದರು. ಹೀಗೆ ಕ್ವಾರಂಟೈನ್ ಕೇಂದ್ರದಲ್ಲಿದ್ದ ಭೂಪ, ಊಟಕ್ಕೆ ಚಿಕನ್ ಬೇಕು, ಮಕ್ಕಳಿಗೆ ಚಿಪ್ಸ್ ಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಈ ವೇಳೆ ಆಶಾಕಾರ್ಯಕರ್ತೆ ರೇಣುಕಾ, ಆಹಾರ ಸರಬರಾಜು ನನ್ನಿಂದ ಆಗಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಸೋಮನಾಥ್, ರೇಣುಕಾ ಮೇಲೆ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಸೋಮನಾಥ್ ಸೇರಿ ಐವರ ಮೇಲೆ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








