ಮಲಪ್ಪುರಂ, ಮೇ 23 : ಕೇರಳದ ಕೋಳಿ ಫಾರಂನಲ್ಲಿ ಕೋಳಿ ಇಟ್ಟ ಮೊಟ್ಟೆಯೊಳಗೆ ಹಳದಿ ಬಣ್ಣದ ಲೋಳೆಯ ಬದಲು ಹಸಿರು ಬಣ್ಣದ ಲೋಳೆ ಕಂಡುಬಂದಿದ್ದು ಅಚ್ಚರಿಗೆ ಕಾರಣವಾಗಿದೆ. ಕೇರಳದ ಮಲಪ್ಪುರಂನ ಒತ್ತುಕ್ಕುಂಗಲ್ ನಲ್ಲಿ ಎ.ಕೆ ಶಹೀಬುದ್ದೀನ್ ಎಂಬುವವರಿಗೆ ಸೇರಿರುವ ಕೋಳಿ ಫಾರಂನಲ್ಲಿ ಈ ಘಟನೆ ಕಂಡುಬಂದಿದ್ದು, ಹಸಿರು ಬಣ್ಣದ ಲೋಳೆಯ ಮೊಟ್ಟೆಯ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ ಹಲವಾರು ಮಂದಿ ಶಹೀಬುದ್ದೀನ್ ಅವರಿಗೆ ಕರೆ ಮಾಡಿ, ಹಸಿರು ಬಣ್ಣದ ಲೋಳೆಯ ಮೊಟ್ಟೆಯ ಕುರಿತು ವಿಚಾರಿಸುತ್ತಿದ್ದಾರೆ.
ಇತ್ತೀಚೆಗೆ ಶಹೀಬುದ್ದೀನ್ ತಮ್ಮ ಕೋಳಿ ಫಾರಂನ ಕೋಳಿಯೊಂದರ ಮೊಟ್ಟೆಯನ್ನು ಬೇಯಿಸಿದ್ದರು. ನಂತರ ಬೇಯಿಸಿದ ಮೊಟ್ಟೆಯನ್ನು ತಿನ್ನಲು ನೋಡುವಾಗ ಮೊಟ್ಟೆಯ ಲೋಳೆ ಹಸಿರು ಬಣ್ಣದಿಂದ ಕೂಡಿತ್ತು. ಇದರಿಂದ ಗಾಬರಿಯಾದ ಮನೆಯವರು ಅದನ್ನು ತಿನ್ನದೇ ಹಾಗೆಯೇ ಬಿಟ್ಟಿದ್ದರು. ಇದೀಗ ಹಸಿರು ಬಣ್ಣದ ಲೋಳೆಯ ಮೊಟ್ಟೆ ಇಟ್ಟಿದ್ದ ಕೊಳಿಯ ಇತರೆ ಮೊಟ್ಟೆಗಳಿಂದ ಮರಿ ಮಾಡಿದ್ದು, ಅವು ದೊಡ್ಡದಾಗಿ ಅವುಗಳು ಕೂಡ ಹಸಿರು ಬಣ್ಣದ ಲೋಳೆಯಿರುವ ಮೊಟ್ಟೆಗಳನ್ನು ಇಡುತ್ತಿವೆ. ಶಹೀಬುದ್ದೀನ್ ಕುಟುಂಬ ಆ ಘಟನೆಯ ಬಳಿಕ ಹಸಿರು ಬಣ್ಣದ ಲೋಳೆ ಇರುವ ಮೊಟ್ಟೆಗಳನ್ನು ತಿನ್ನಲು ಪ್ರಾರಂಭಿಸಿದ್ದು, ಅವರಿಗೆ ಇದರಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಾಗಿಲ್ಲ ಮತ್ತು ರುಚಿಯಲ್ಲೂ ಯಾವುದೇ ರೀತಿಯ ಭಿನ್ನತೆ ಇಲ್ಲ ಎಂದು ಹೇಳಿದ್ದಾರೆ.
ಹಲವಾರು ಮಂದಿ ಶಹೀಬುದ್ದೀನ್ ಅವರಿಗೆ ಕರೆ ಮಾಡಿ ಹಸಿರು ಬಣ್ಣದ ಲೋಳೆ ಇರುವ ಮೊಟ್ಟೆಗಳು ಮತ್ತು ಅದರ ಕೋಳಿಗಳ ಬಗ್ಗೆ ವಿಚಾರಿಸಿ, ತಮಗೂ
ಬೇಕು ಎಂದು ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ, ಹಸಿರು ಬಣ್ಣದ ಲೋಳೆಯ ಮೊಟ್ಟೆಗಳಿಡುವ ಕೋಳಿಗಳನ್ನು ಮತ್ತು ಅದರ ಮೊಟ್ಟೆಗಳ ಉತ್ಪಾದನೆಯನ್ನು ಹೆಚ್ಚಿಸಿ ವ್ಯಾಪಾರ ಮಾಡುವ ಕುರಿತು ಅವರು ನಿರ್ಧರಿಸಿದ್ದಾರೆ.
ಇದೀಗ ಹಸಿರು ಬಣ್ಣದ ಲೋಳೆ ಇರುವ ಮೊಟ್ಟೆಗಳ ವಿಚಾರ ಕೇರಳದಾದ್ಯಂತ ವ್ಯಾಪಕ ಸುದ್ದಿಗೆ ಕಾರಣವಾಗಿದ್ದು, ಕೇರಳದ ಕೆಲ ವಿಜ್ಞಾನಿಗಳು ಈ ಕೋಳಿ ಮತ್ತು ಮೊಟ್ಟೆಗಳ ಮೇಲೆ ಸಂಶೋಧನೆ ಆರಂಭಿಸಿದ್ದಾರೆ. ಪಶು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹರಿಕೃಷ್ಣ ಎಸ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಹಸಿರು ಬಣ್ಣದ ಲೋಳೆಯ ಮೊಟ್ಟೆ ಮತ್ತು ಅದರ ಕೋಳಿಯ ಮೇಲಿನ ಸಂಶೋಧನೆ ಪ್ರಗತಿಯಲ್ಲಿದೆ.
ಮೂರು ನಾಲ್ಕು ವಾರಗಳ ಅಧ್ಯಯನದ ಬಳಿಕ ಇದಕ್ಕೆ ಉತ್ತರ ಸಿಗಬಹುದು ಎಂದು ಹೇಳಿದ್ದಾರೆ. ಕೋಳಿ ತಿಂದಿರುವ ಆಹಾರದ ಮೇಲೆ ಸಂಶಯವಿದ್ದು, ಬೇರೆ ಏನಾದರೂ ತಿಂದಿರಬೇಕು. ಈ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಮೂರು ವಾರಗಳ ನಂತರವೂ ಕೋಳಿಗಳು ಇದೇ ರೀತಿಯ ಮೊಟ್ಟೆ ಇಟ್ಟರೆ ಆಗ ಬೇರೆ ರೀತಿಯ ಅಧ್ಯಯನ ನಡೆಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.







