ವಾಷಿಂಗ್ಟನ್, ಮೇ 24 : ಇತ್ತೀಚೆಗಷ್ಟೇ ವೈಟ್ ಹೌಸ್ ಪ್ರೆಸ್ ಬ್ರೀಫಿಂಗ್ ವೇಳೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಡೆಡ್ಲಿ ಕೊರೊನಾ ವೈರಸ್ ಕೊಲ್ಲಲು ಮನುಷ್ಯನ ದೇಹದೊಳಗೆ ಲೈಟ್, ಹೀಟ್ ಅಥವಾ ಡಿಸ್ ಇನ್ಫೆಕ್ಟೆಂಟ್ ಇನ್ಜೆಕ್ಟ್ ಮಾಡಬಹುದಾ?” ಎಂದು ಕೇಳಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಇದೀಗ ವೈಟ್ ಹೌಸ್ ಪ್ರೆಸ್ ಬ್ರೀಫಿಂಗ್ ವೇಳೆ ಡೊನಾಲ್ಡ್ ಟ್ರಂಪ್ ಅವರ ಪ್ರೆಸ್ ಸೆಕ್ರೆಟರಿ ಕೇಲೀಗ್ ಮೆಕ್ ಎನಾನಿ, ಡೊನಾಲ್ಡ್ ಟ್ರಂಪ್ ರವರ ಖಾಸಗಿ ಬ್ಯಾಂಕ್ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.
ಕೇಲೀಗ್ ಮೆಕ್ ಎನಾನಿ ವೈಟ್ ಹೌಸ್ ಪ್ರೆಸ್ ಬ್ರೀಫಿಂಗ್ ಸಮಯದಲ್ಲಿ ಡಿಪಾರ್ಟ್ಮೆಂಟ್ ಅಫ್ ಹೆಲ್ತ್ ಅಂಡ್ ಹ್ಯೂಮನ್ ಸರ್ವೀಸಸ್ (ಎಚ್.ಎಚ್.ಎಸ್)ಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಚೆಕ್ ಅನ್ನು ಮಾಧ್ಯಮಗಳಿಗೆ ತೋರಿಸಲು ಹೋಗಿ ಟ್ರಂಪ್ ರವರ ಖಾಸಗಿ ಬ್ಯಾಂಕ್ ಮಾಹಿತಿಯನ್ನು ತೋರಿಸಿ ಎಡವಟ್ಟು ಮಾಡಿಕೊಂಡಿದ್ದಾರೆ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಡಿಪಾರ್ಟ್ಮೆಂಟ್ ಅಫ್ ಹೆಲ್ತ್ ಅಂಡ್ ಹ್ಯೂಮನ್ ಸರ್ವೀಸಸ್ (ಎಚ್.ಎಚ್.ಎಸ್)ಗೆ 2020 ರ ತಮ್ಮ ಗಳಿಕೆಯಲ್ಲಿನ $100,000 ಅನ್ನು ದೇಣಿಗೆ ನೀಡಲು ಚೆಕ್ ಕೊಟ್ಟಿದ್ದರು. ಶುಕ್ರವಾರ ನಡೆದ ಪ್ರೆಸ್ ಬ್ರೀಫಿಂಗ್ ಸಮಯದಲ್ಲಿ ಮಾಧ್ಯಮದ ಕ್ಯಾಮರಾಗಳ ಮುಂದೆ ಪ್ರೆಸ್ ಸೆಕ್ರೆಟರಿ ಕೇಲೀಗ್ ಮೆಕ್ ಎನಾನಿ ಆ ಚೆಕ್ ಅನ್ನು ತೋರಿಸಿ, ಡೊನಾಲ್ಡ್ ಟ್ರಂಪ್ ರವರ ಬ್ಯಾಂಕ್ ಮಾಹಿತಿಯನ್ನು ಜಗಜ್ಜಾಹೀರಗೊಳಿಸಿದ್ದಾರೆ.
ಕೇಲೀಗ್ ಮೆಕ್ ಎನಾನಿ ತೋರಿಸಿದ ಚೆಕ್ ನಲ್ಲಿದ್ದ,ಡೊನಾಲ್ಡ್ ಟ್ರಂಪ್ ರವರ ಬ್ಯಾಂಕ್ ಅಕೌಂಟ್ ಕುರಿತಾದ ಸಂಪೂರ್ಣ ಮಾಹಿತಿ, ಖಾಸಗಿ ವಿಳಾಸ ಮತ್ತು ಸಹಿಯನ್ನು ಕೂಡ ಮಾಧ್ಯಮಗಳ ಕ್ಯಾಮರಾಗಳು ಸೆರೆಹಿಡಿದಿದ್ದು, ‘ಹ್ಯಾಕಿಂಗ್’ ಅಪಾಯ ಎದುರಾಗಿದೆ. ಟ್ರಂಪ್ ಅವರ ಬ್ಯಾಂಕ್ ಮಾಹಿತಿ ಬಹಿರಂಗವಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಐಡೆಂಟಿಟಿ ಥೆಫ್ಟ್ ರಿಸೋರ್ಸ್ ಸೆಂಟರ್ ನ ಚೀಫ್ ಎಕ್ಸಿಕ್ಯೂಟಿವ್ ಇವಾ ವೆಲಾಸ್ಕ್ವೆಜ್ ತಿಳಿಸಿದ್ದರೆ, ವೈಟ್ ಹೌಸ್ ವಕ್ತಾರ ಜುಡ್ ಡೀರೆ ಅವರು ರಾಷ್ಟ್ರಕ್ಕೆ ಮಾರಕವಾಗಿ ಪರಿಣಮಿಸಿರುವ ಕೊರೊನಾ ವೈರಸ್ ಗೆ ಹೊಸ ಚಿಕಿತ್ಸೆ ಕಂಡುಹಿಡಿಯಲು ಡೊನಾಲ್ಡ್ ಟ್ರಂಪ್ ಎಚ್.ಎಚ್.ಎಸ್ ಗೆ ದೇಣಿಗೆ ನೀಡಿದ್ದಾರೆ. ಆದರೆ ಮಾಧ್ಯಮಗಳು ಅದಕ್ಕೆ ಮಹತ್ವ ಕೊಡುವುದು ಬಿಟ್ಟು ಚೆಕ್ ಕುರಿತು ಸುದ್ದಿ ಮಾಡುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದು ಹೇಳಿದ್ದಾರೆ.








