ಟ್ರ್ಯಾಕ್ಟರ್ ಪಲ್ಟಿ: ನಿಶ್ಚಿತಾರ್ಥಕ್ಕೆ ಹೊರಟಿದ್ದ ನಾಲ್ವರ ಸಾವು, ಹಲವರಿಗೆ ಗಾಯ
ನಿಶ್ಚಿತಾರ್ಥಕ್ಕೆಂದು ತೆರಳುತ್ತಿದ್ದಾಗ ಟ್ರ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದರೆ. ಚಿಕಿತ್ಸೆ ಫಲಿಸದೆ ಕಾರಟಗಿ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ನವಲಿಯಲ್ಲಿ ನಡೆದಿದೆ.
ನಿಶ್ಚಿತಾರ್ಥಕ್ಕೆ ಟ್ರ್ಯಾಕ್ಟರ್‌ನಲ್ಲಿ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಯಮನೂರಪ್ಪ(55) ಮತ್ತು ಅಂಬಮ್ಮ(50) ಸ್ಥಳದಲ್ಲೇ ಅಸುನೀಗಿದವರು. ಶೇಶಪ್ಪ ಬಂಡಿ (40) ಮತ್ತು ಯಮನಪ್ಪ ಸಿಂಧನೂರು (35) ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.
ಸುಮಾರು 10 ಜನರನ್ನ ಕಾರಟಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಸೇರಿದಂತೆ ಕನಕಗಿರಿ ಪೊಲೀಸ್ ತಂಡ ಭೇಟಿ ನೀಡಿದೆ.
ನವಲಿ ಗ್ರಾಮದ ಬಳಿಯ ರೈಸ್ ಟೆಕ್ನಾಲಜಿ ಪಾರ್ಕ್ ಬಳಿ ಈ ದುರ್ಘಟನೆ ನಡೆದಿದ್ದು, ಮೃತರು ಕಾರಟಗಿ ಪಟ್ಟಣದ 18ನೇ ವಾರ್ಡ್ ನ ನಿವಾಸಿಗಳು ಎಂದು ತಿಳಿದುಬಂದಿದೆ. ಕಾರಟಗಿಯಿಂದ ಕನಕಗಿರಿಯ ಸಿರವಾರ ಕಡೆಗೆ ಟ್ರ್ಯಾಕ್ಟರ್ ಹೊರಟಿತ್ತು.








