ಮಂಗಳೂರು, ಮೇ 24: ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಇಂದು ಮುಸ್ಲಿಂ ಬಾಂಧವರು ಮನೆಗಳಲ್ಲಿ ಪ್ರಾರ್ಥನೆ, ನಮಾಜ್ ಮಾಡಿ ರಂಜಾನ್ ಆಚರಣೆ ಮಾಡಿದ್ದಾರೆ.
ಕೊರೋನಾ ಸೋಂಕನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆಯ ಕಾರಣ ಯಾವುದೇ ಮಸೀದಿಗಳಲ್ಲೂ ಸಾಮೂಹಿಕ ನಮಾಜ್ ಮಾಡದೇ ಮನೆಗಳಲ್ಲಿ ಪ್ರಾರ್ಥನೆ, ನಮಾಜ್ ಮಾಡಿದ್ದಾರೆ.
ಮನೆಯಲ್ಲಿಯೇ ಮನೆಯ ಸದಸ್ಯರು ಸೇರಿಕೊಂಡು ಈದ್ ನಮಾಜ್ ಮಾಡಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.

ಲಾಕ್ ಡೌನ್ ಮತ್ತು ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಉಡುಪಿ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ ಮುಸ್ಲಿಂ ಬಾಂಧವರಿಗೆ ಮನೆಯಲ್ಲೇ ಹಬ್ಬ ಆಚರಣೆ ಮಾಡುವಂತೆ ಮನವಿ ಮಾಡಿತ್ತು.
ಉಡುಪಿ ಜಿಲ್ಲೆಯಲ್ಲಿ ಜಾಮಿಯಾ ಮಸೀದಿಯಿಂದ ನಮಾಜ್ ನ ನೇರ ಪ್ರಸಾರ ಕಾರ್ಯಕ್ರಮವನ್ನು ಆಯೋಜಿಸಿದ್ದು, ಟಿವಿ ನೋಡುತ್ತಾ ನಮಾಜ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಧರ್ಮ ಗುರುಗಳು ನಮಾಜ್ ನಂತರ ಪ್ರಾರ್ಥನಾ ವಿಧಿಗಳನ್ನು ಪೂರೈಸಿ ಖುರಾನ್ ಪಠಣ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆ ಉಡುಪಿ ಹಾಗೂ ಕೊಡಗು ಜಿಲ್ಲೆಯಲ್ಲಿ ರಂಜಾನ್ ಹಬ್ಬವನ್ನು ಇಂದು ಆಚರಿಸಲಾಗುತ್ತಿದ್ದು, ಬೆಂಗಳೂರು ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಸೋಮವಾರ ಆಚರಿಸಲಾಗುತ್ತಿದೆ.








