ಗೃಹಲಕ್ಷ್ಮಿ ಯೋಜನೆಯಡಿ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಪಟ್ಟಿಯಿಂದ ಕೈಬಿಡಲು ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಯೋಜನೆಯಡಿ ನೋಂದಣಿಯಾಗಿರುವ ಫಲಾನುಭವಿಗಳ ವಿವರಗಳನ್ನು ರಾಜ್ಯಾದ್ಯಂತ ಮರುಪರಿಶೀಲಿಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಈ ಮರುಪರಿಶೀಲನೆ ವೇಳೆ ಬಯೋಮೆಟ್ರಿಕ್ ಹಾಗೂ ಫೇಶಿಯಲ್ ಅಥೆಂಟಿಕೇಷನ್ ಮೂಲಕ ಫಲಾನುಭವಿಗಳ ಗುರುತನ್ನು ದೃಢೀಕರಿಸಲಾಗುತ್ತದೆ. ಈ ಪ್ರಕ್ರಿಯೆಗಾಗಿ ಸರ್ಕಾರ ₹20 ಕೋಟಿ ಅನುದಾನ ಮೀಸಲಿಟ್ಟಿದೆ.
ಮರುಪರಿಶೀಲನೆಗೆ ಕಾರಣವೇನು?
ಕಳೆದ ಮೂರು ವರ್ಷಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಲ್ಲಿ ಹಲವು ಬದಲಾವಣೆಗಳು ಸಂಭವಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಕೆಲವರು ಮೃತಪಟ್ಟಿರುವುದು, ಕೆಲವರು ವಲಸೆ ಹೋಗಿರುವುದು ಹಾಗೂ ಕೆಲವು ಫಲಾನುಭವಿಗಳು ಅಥವಾ ಅವರ ಪತಿಗಳು ಆದಾಯ ತೆರಿಗೆ ಪಾವತಿಸಲು ಅಥವಾ GST ರಿಟರ್ನ್ಸ್ ಸಲ್ಲಿಸಲು ಆರಂಭಿಸಿರುವ ಪ್ರಕರಣಗಳು ವರದಿಯಾಗಿವೆ.
ಹೀಗಾಗಿ ಯೋಜನೆಯಡಿ ಇದುವರೆಗೆ ನೋಂದಣಿಯಾಗಿರುವ ಎಲ್ಲಾ ಫಲಾನುಭವಿಗಳ ಒಟ್ಟಾರೆ ಮರುಪರಿಶೀಲನೆ ಅಗತ್ಯ ಎಂದು ಸರ್ಕಾರ ನಿರ್ಧರಿಸಿದೆ.
ಮನೆ-ಮನೆ ಸಮೀಕ್ಷೆ ಮೂಲಕ ಪರಿಶೀಲನೆ
ಮರುಪರಿಶೀಲನೆ ಕಾರ್ಯದಲ್ಲಿ RDPR ಹಾಗೂ ನಗರಾಭಿವೃದ್ಧಿ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಂಬಂಧಿತ ಅಧಿಕಾರಿಗಳು ಗುರುತಿಸುವ ಇತರ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತದೆ.
ಮನೆ-ಮನೆ ಸಮೀಕ್ಷೆಯ ಜೊತೆಗೆ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ CSC (ಬಾಪೂಜಿ ಸೇವಾ ಕೇಂದ್ರ)ಗಳ ಮೂಲಕವೂ ಪರಿಶೀಲನಾ ಪ್ರಕ್ರಿಯೆ ನಡೆಸಲು ವ್ಯವಸ್ಥೆ ಮಾಡಲಾಗುತ್ತದೆ.
ವೆಬ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಪರಿಶೀಲನೆ
ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ಸ್ ಸರ್ವಿಸಸ್ ನಿರ್ದೇಶನಾಲಯ (EDCS) ಅಭಿವೃದ್ಧಿಪಡಿಸಿರುವ ವೆಬ್ ಅಪ್ಲಿಕೇಶನ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಫಲಾನುಭವಿಗಳ ವಿವರಗಳನ್ನು ಮರುಪರಿಶೀಲಿಸಲಾಗುತ್ತದೆ.
ಸರ್ಕಾರ ನಿಗದಿಪಡಿಸಿರುವ ₹20 ಕೋಟಿ ಅನುದಾನದ ಮಿತಿಯೊಳಗೆ ಸಂಪೂರ್ಣ ಪ್ರಕ್ರಿಯೆಯನ್ನು ಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮುಖ್ಯಮಂತ್ರಿಯವರಿಂದ ಅನುಮೋದಿಸಲ್ಪಟ್ಟ ನಿರ್ದಿಷ್ಟ ಕಾರ್ಯವಿಧಾನ (SOP)ದಂತೆ ಮರುಪರಿಶೀಲನೆ ನಡೆಸಲಾಗುತ್ತದೆ.
ಈ ಕ್ರಮದ ಮೂಲಕ ಅನರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ತೆಗೆದುಹಾಕುವುದರ ಜೊತೆಗೆ, ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ಸಕಾಲದಲ್ಲಿ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ.








