ಬೆಂಗಳೂರು, ಮೇ 24 : ಬೊಮ್ಮನಹಳ್ಳಿ ವ್ಯಾಪ್ತಿಯ ಪುಟ್ಟೇನಹಳ್ಳಿ ವ್ಯಾಪ್ತಿಯಲ್ಲಿ ತಮಿಳುನಾಡಿನಿಂದ ಹಿಂದಿರುಗಿದ 57 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಆ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ವ್ಯಾಪ್ತಿಗೆ ಸೇರಿಸಲಾಗಿದೆ.
ಪುಟ್ಟೇನಹಳ್ಳಿಯ ಬ್ರಿಗೇಡ್ ಮಿಲೇನಿಯಂ ವಸತಿ ಸಮುಚ್ಚಯದಲ್ಲಿ ವಾಸವಾಗಿರುವ ತಮಿಳುನಾಡಿನಿಂದ ಹಿಂದಿರುಗಿದ 57 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿತ್ತು. ಇವರು ಇತ್ತೀಚೆಗಷ್ಟೇ ಬೈಪಾಸ್ ಸರ್ಜರಿಗೆ ಒಳಗಾಗಿದ್ದರು.
ಇದೀಗ ಅವರ ಪತ್ನಿ, ಮಗ ಹಾಗೂ ಮಗಳು ಸೇರಿ ಮೂವರನ್ನು ಕ್ವಾರಂಟೈನ್ ಮಾಡಲಾಗಿದ್ದು, ವಸತಿ ಸಮುಚ್ಚಯದ ಮನೆಯ ಮೇಲ್ಭಾಗದಲ್ಲಿ ಹಾಗೂ ಕೆಳಭಾಗದಲ್ಲಿ ಇದ್ದವರನ್ನು ಕೂಡ ಕಡ್ಡಾಯವಾಗಿ 14 ದಿನ ಕ್ವಾರಂಟೈನ್ ನಲ್ಲಿ ಇರಲು ಸೂಚನೆ ನೀಡಲಾಗಿದೆ.
ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಪಿಪಿಇ ಕಿಟ್ ನೀಡುವಂತೆ ವಸತಿ ಸಮುಚ್ಚಯದ ನಿರ್ವಾಹಕರಿಗೆ ಸೂಚಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಪುಟ್ಟೇನಹಳ್ಳಿಯನ್ನು ಕಂಟೈನ್ಮೆಂಟ್ ಮಾಡಲಾಗಿದೆ.
ಕೊರೋನಾ ಸೋಂಕು ಪತ್ತೆಯಾದ ಹೊಸ 5 ವಾರ್ಡ್ ಗಳನ್ನು ಕಂಟೈನ್‌ಮೆಂಟ್ ಪ್ರದೇಶ ಎಂದು ಬಿಬಿಎಂಪಿ ಘೋಷಿಸಿದ್ದು, ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ 22ಕ್ಕೆ ಏರಿದೆ.








