ಉಕ್ರೇನ್ ರಷ್ಯಾ ಬಿಕ್ಕಟ್ಟು: ಯುದ್ಧದ 19 ನೇ ದಿನದ ಅಪ್ಡೇಟ್…..
ಇಂದು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ 19 ನೇ ದಿನ. ಉಭಯ ದೇಶಗಳ ನಡುವಿನ ಸಮನ್ವಯಕ್ಕೆ ಯಾವುದೇ ದಾರಿ ಕಾಣಿಸುತ್ತಿಲ್ಲ. ಇಂದು ರಷ್ಯಾ ಮತ್ತು ಉಕ್ರೇನ್ ನಡುವೆ ನಾಲ್ಕನೇ ಸುತ್ತಿನ ಮಾತುಕತೆ ನಡೆಯಬಹುದು ಮಾಹಿತಿ ಇದೆ. ಇದರ ಮಧ್ಯೆ ಉಕ್ರೇನ್ ಮೇಲಿನ ದಾಳಿಯನ್ನ ರಷ್ಯಾ ಇನ್ನಷ್ಟು ತೀವ್ರಗೊಳಿಸಿದೆ.
ರಷ್ಯಾದ ದಾಳಿಯುಯಿಂದ ಉಕ್ರೇನಿಯನ್ ಮೂಲಸೌಕರ್ಯಕ್ಕೆ 119 ಶತಕೋಟಿ ಡಾಲರ್ ಗೂ ಹೆಚ್ಚು ಹಾನಿಯನ್ನುಂಟಾಗಿದೆ ಎಂದು ಉಕ್ರೇನಿಯನ್ ಸಚಿವ ಡೆನಿಸ್ ಕುಡಿನ್ ಹೇಳಿದ್ದಾರೆ.
ದಕ್ಷಿಣ ಬಂದರು ನಗರವಾದ ಮೈಕೋಲೆವ್‌ನಲ್ಲಿ ರಷ್ಯಾದ ವಾಯುದಾಳಿಯಲ್ಲಿ ಒಂಬತ್ತು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 12 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ಹೇಳಿದ್ದಾರೆ.
ಉಕ್ರೇನ್ ಮತ್ತು ರಷ್ಯಾ ಅಧಿಕಾರಿಗಳು ಇಂದು ಮತ್ತೆ ಶಾಂತಿ ಮಾತುಕತೆ ನಡೆಸಲಿದ್ದಾರೆ. ಈ ಸಂಭಾಷಣೆಯು ವೀಡಿಯೊ ಕರೆ ಮೂಲಕ ನಡೆಯುತ್ತದೆ ಎಂದು ಸ್ಪುಟ್ನಿಕ್ ಸುದ್ಧಿ ಸಂಸ್ಥೆ ವರದಿ ಮಾಡಿದೆ.
ಅಮೆರಿಕದ ಪತ್ರಕರ್ತ ಬ್ರೆಂಟ್ ರೆನಾಡ್ ಅವರು ಉಕ್ರೇನ್‌ನ ಇರ್ಪಿನ್ ನಗರದಲ್ಲಿ ರಷ್ಯಾದ ಮಿಲಿಟರಿ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಸಹ ಪತ್ರಕರ್ತ ಜುವಾನ್ ಅರೆಡೊಂಡೋ ಗಾಯಗೊಂಡಿದ್ದಾರೆ.
ಉಕ್ರೇನ್ ಮೇಲಿನ ದಾಳಿಯ ಖಂಡಿಸಿ ಭಾನುವಾರ ಮಾಸ್ಕೋದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಇದರಲ್ಲಿ ಭಾಗಿಯಾಗಿದ್ದ 800ಕ್ಕೂ ಹೆಚ್ಚು ಜನರನ್ನು ರಷ್ಯಾ ಪೊಲೀಸರು ಬಂಧಿಸಿದ್ದಾರೆ. ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ವಿದೇಶಿ ನಿರ್ಬಂಧಗಳಿಂದಾಗಿ 2.30 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ರಷ್ಯಾದ ಹಣಕಾಸು ಸಚಿವ ಆಂಟನ್ ಸಿಲುವಾನೋವ್ ಭಾನುವಾರ ಹೇಳಿದ್ದಾರೆ.
ಉಭಯ ದೇಶಗಳ ನಡುವಿನ ಯುದ್ಧದಿಂದಾಗಿ ಯುರೋಪ್ ದೇಶಗಳಲ್ಲಿ ಕರೋನಾ ವೈರಸ್ ನ ಅಪಾಯ ಹೆಚ್ಚಾಗಿದೆ. ಇಲ್ಲಿಯವರೆಗೆ ಎರಡು ದಶಲಕ್ಷಕ್ಕೂ ಹೆಚ್ಚು ಉಕ್ರೇನಿಯನ್ ನಿರಾಶ್ರಿತರು ಯುರೋಪಿಯನ್ ದೇಶಗಳಿಗೆ ಆಗಮಿಸಿದ್ದಾರೆ. ಇವರಲ್ಲಿ ಹೆಚ್ಚಿನವರು ಲಸಿಕೆ ಹಾಕಿಲ್ಲ. ಮಾರ್ಚ್ 3 ಮತ್ತು 9 ರ ನಡುವೆ ಉಕ್ರೇನ್ ಮತ್ತು ಸುತ್ತಮುತ್ತಲಿನ ದೇಶಗಳಲ್ಲಿ ಒಟ್ಟು 7,91,021 ಹೊಸ ಕರೋನಾ ಪ್ರಕರಣಗಳು ಮತ್ತು 8,012 ಹೊಸ ಸಾವುಗಳು ದಾಖಲಾಗಿವೆ ಎಂದು WHO ಭಾನುವಾರ ಪ್ರಕಟಿಸಿದ ವರದಿಯಲ್ಲಿ ತಿಳಿಸಿದೆ.








