ದೆಹಲಿ, ಮೇ 24 : ಕೊರೋನಾ ವೈರಸ್ ನ ಆರ್ಭಟ ಭಾರತದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ವಿಶ್ವದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 10ನೇ ಸ್ಥಾನಕ್ಕೇರಿದೆ. ದೇಶದಲ್ಲಿ 24 ಗಂಟೆಗಳ ಅವಧಿಯಲ್ಲಿ 6,767 ಜನರಿಗೆ ಸೋಂಕು ದೃಢಪಟ್ಟಿದ್ದು, 147 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಲಾಕ್ ಡೌನ್ ಸಡಿಲಿಕೆಯ ನಂತರ ಕೊರೊನಾ ಪ್ರಕರಣಗಳು ಏರುಗತಿಯಲ್ಲಿ ಹೆಚ್ಚಳವಾಗುತ್ತಿದ್ದು, ಆತಂಕ ಹುಟ್ಟಿಸಿದೆ. ಇಲ್ಲಿಯವರೆಗೆ ಸೋಂಕು ಪೀಡಿತರ ಸಂಖ್ಯೆ 1.32 ಲಕ್ಷಕ್ಕೇರಿದ್ದು, ಒಟ್ಟು 3,867 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ 8 ದಿನಗಳಿಂದ ಸರಾಸರಿ 5500 ಕೊರೋನಾ ಸೋಂಕು ಪ್ರಕರಣಗಳು ವರದಿಯಾಗುತ್ತಲಿದ್ದು, ಕಳೆದ ಮೂರು ದಿನಗಳಿಂದ 6000 ಕ್ಕೆ ಏರಿಕೆ ಕಂಡಿದೆ.
ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 60, ಗುಜರಾತ್ನಲ್ಲಿ 27, ದೆಹಲಿ 23, ಮಧ್ಯಪ್ರದೇಶ 9, ಪಂಜಾಬ್ 7, ತಮಿಳುನಾಡು 5, ಪಶ್ಚಿಮಬಂಗಾಳ ಮತ್ತು ತೆಲಂಗಾಣ 4, ಉತ್ತರ ಪ್ರದೇಶ 3, ಹಾಗೂ ಆಂದ್ರಪ್ರದೇಶ ಮತ್ತು ಜಮ್ಮು-ಕಾಶ್ಮೀರದಲ್ಲಿ ಒಂದು ಕೊರೊನಾ ಸೋಂಕಿನಿಂದ ಸಾವು ಸಂಭವಿಸಿದೆ. ನಿನ್ನೆ ಮಧ್ಯ ರಾತ್ರಿವರೆಗಿನ ಮಾಹಿತಿಯ ಪ್ರಕಾರ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,31,868 ತಲುಪಿದ್ದು, ಇಂದು ಮಧ್ಯ ರಾತ್ರಿಯೊಳಗೆ 1.36 ಲಕ್ಷ ದಾಟಬಹುದು ಎಂದು ಅಂದಾಜಿಸಲಾಗಿದೆ.
ದೇಶದಲ್ಲಿ ಕೊರೋನಾ ಸೋಂಕಿಗೆ ಸಂಬಂಧಿಸಿದ ಸಾವು ಪ್ರಕರಣಗಳಲ್ಲಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದು, ಇಲ್ಲಿಯವರೆಗೆ ಒಟ್ಟು 1,577 ಸಾವುಗಳು ಸಂಭವಿಸಿದೆ. ಗುಜರಾತ್ ಎರಡನೇ ಸ್ಥಾನದಲ್ಲಿದ್ದು, 829 ಸಾವುಗಳು ಸಂಭವಿಸಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ, ರಾಜಸ್ತಾನ, ಉತ್ತರ ಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಪಂಜಾಬ್, ಜಮ್ಮು-ಕಾಶ್ಮೀರ, ಹರಿಯಾಣ, ಬಿಹಾರ, ಒಡಿಶಾ, ಕೇರಳ, ಜಾರ್ಖಂಡ್, ಅಸ್ಸಾಂ, ಚಂಡಿಗಢ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪುದುಚೇರಿ, ಮತ್ತು ಮೇಘಾಲಯ ರಾಜ್ಯಗಳಿವೆ. ದೇಶದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲೂ ಏರಿಕೆಯಾಗಿದ್ದು ಇಲ್ಲಿಯವರೆಗೆ 54,440 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.








