ಬೆಂಗಳೂರು, ಮೇ 25 : ಕರ್ನಾಟಕದಲ್ಲಿ ಮೇ 25 ರಿಂದ ಲಾಕ್ ಡೌನ್ ನಿಯಮ ಇನ್ನಷ್ಟು ಸಡಿಲಗೊಳಿಸಲಾಗಿದೆ. ರಾಜ್ಯದಲ್ಲಿ ಮೇ 25 ರಿಂದ ದೇಶಿ ವಿಮಾನ ಮತ್ತು ಜೂನ್ 1 ರಿಂದ ರೈಲು ಸೇವೆ ಆರಂಭವಾಗಲಿದೆ. ಅಂತರ್ ಜಿಲ್ಲಾ ಪಾಸುಗಳ ಅವಶ್ಯಕತೆ ಇನ್ನು ಕರ್ನಾಟಕದಲ್ಲಿ ಅಗತ್ಯವಿಲ್ಲ. ಆದರೆ ಬೇರೆ ರಾಜ್ಯದಿಂದ ಬೆಂಗಳೂರು ನಗರಕ್ಕೆ ಆಗಮಿಸುವವರು ಕೆಲವೊಂದು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಬೆಂಗಳೂರು ನಗರಕ್ಕೆ ಬ್ಯುಸಿನೆಸ್ ಟ್ರಿಪ್ ಬರುವವರು ಕಡ್ಡಾಯವಾಗಿ ಕೋವಿಡ್ – 19 ನೆಗೆಟಿವ್ ಪ್ರಮಾಣ ಪತ್ರ ಹೊಂದಿರಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.
ಪ್ರಮಾಣ ಪತ್ರವನ್ನು ಐಸಿಎಂಆರ್ ಮಾನ್ಯತೆ ಪಡೆದ ಲ್ಯಾಬ್ಗಳಿಂದ ಪಡೆದಿರಬೇಕು, ತಪ್ಪಿದಲ್ಲಿ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗುತ್ತದೆ.
ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಿರುವ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ದೆಹಲಿ, ರಾಜಸ್ಥಾನ, ಮಧ್ಯಪ್ರದೇಶದಿಂದ ಬೆಂಗಳೂರಿಗೆ ಬರುವವರು ಕಡ್ಡಾಯವಾಗಿ 7 ದಿನದ ಸರ್ಕಾರಿ ಕ್ವಾರಂಟೈನ್ ಗೆ ಒಳಗಾಗಬೇಕು. ಮತ್ತು ಕೊರೊನಾ ಪರೀಕ್ಷಾ ವರದಿ ಬರುವವರೆಗೆ ಹೋಂ ಕ್ವಾರಂಟೈನ್ನಲ್ಲಿರಬೇಕು ಎಂದು ಸೂಚಿಸಲಾಗಿದೆ.
ಬೆಂಗಳೂರಿಗೆ ಬರುವ ಮೊದಲು :
1. ಬೆಂಗಳೂರು ನಗರಕ್ಕೆ ಬರುವ ಮೊದಲು ಕಡ್ಡಾಯವಾಗಿ ಸೇವಾ ಸಿಂಧು ಪೋರ್ಟಲ್ನಲ್ಲಿ ನೋಂದಣಿ ಮಾಡಿರಬೇಕು.
2. ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ದೆಹಲಿ, ರಾಜಸ್ಥಾನ, ಮಧ್ಯಪ್ರದೇಶದಿಂದ ಬರುವವರು ಕಡ್ಡಾಯವಾಗಿ 7 ದಿನದ ಸರ್ಕಾರಿ ಮತ್ತು 7 ದಿನದ ಹೋಂ ಕ್ವಾರಂಟೈನ್ ಗೆ ಒಳಗಾಗಬೇಕು.
3. ಬೆಂಗಳೂರಿಗೆ ಬೇರೆ ರಾಜ್ಯದಿಂದ ಬರುವವರಿಗೆ ಹೋಂ ಕ್ವಾರಂಟೈನ್ ಕಡ್ಡಾಯ
4. ಬೇರೆ ರಾಜ್ಯದಿಂದ ಬಂದವರ ಕೊರೊನಾ ಪರೀಕ್ಷೆಯನ್ನು ಬಂದ 5 ಮತ್ತು 7ನೇ ದಿನ ನಡೆಸಲಾಗುತ್ತದೆ.
5. ಗರ್ಭಿಣಿಯರಿಗೆ, 80 ವರ್ಷ ಮೇಲ್ಪಟ್ಟವರು, ಆರೋಗ್ಯ ಮತ್ತು ರಕ್ಷಣಾ ಇಲಾಖೆ ಸಿಬ್ಬಂದಿಗಳಿಗೆ ಸರ್ಕಾರಿ ಕ್ವಾರಂಟೈನ್ನಿಂದ ವಿನಾಯಿತಿ ನೀಡಲಾಗಿದೆ.
6. ತುರ್ತು ಕಾರ್ಯಕ್ಕಾಗಿ ಬೇರೆ ರಾಜ್ಯದಿಂದ ಬರುವವರಿಗೆ, ಗುತ್ತಿಗೆದಾರರಿಗೆ, ಕೃಷಿ ಯಂತ್ರಗಳ ಮಾರಾಟಗಾರರಿಗೆ ಕ್ವಾರಂಟೈನ್ನಿಂದ ವಿನಾಯಿತಿ ನೀಡಲಾಗಿದೆ.
,ಇವರೆಲ್ಲರೂ ಕಡ್ಡಾಯವಾಗಿ ಕೋವಿಡ್ – 19 ನೆಗೆಟಿವ್ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸೂಚಿಸಲಾಗಿದ್ದು, ಪ್ರಮಾಣ ಪತ್ರ ಐಸಿಎಂಆರ್ ಮಾನ್ಯತೆ ಪಡೆದಿರಬೇಕು ಮತ್ತು ಎರಡು ದಿನಕ್ಕಿಂತ ಹಿಂದಿನದು ಆಗಿರಬಾರದು








