ನವದೆಹಲಿ: ದೇಶದಲ್ಲಿ ನೀಟ್ ಪರೀಕ್ಷಾ ಅಕ್ರಮ ಮತ್ತು ಪೇಪರ್ ಲೀಕ್ ವಿವಾದಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಅಕ್ಷರಶಃ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಯುವಜನರ ಹಿತ ಕಾಯುವ ನಿಟ್ಟಿನಲ್ಲಿ ಪ್ರಧಾನಿ ಹಂಚಿಕೊಂಡ ಒಂದು ರೀಲ್ ವಿಡಿಯೋ ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ವಿಡಿಯೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಐಶೋ ಸ್ಪೀಡ್ ದಾಖಲೆ ಮುರಿದ ಪ್ರಧಾನಿ ಮೋದಿ
ಕೇವಲ 24 ಗಂಟೆಗಳ ಅವಧಿಯಲ್ಲಿ ಪ್ರಧಾನಿ ಮೋದಿಯವರ ಈ ಇನ್‌ಸ್ಟಾಗ್ರಾಮ್ ರೀಲ್ 303 ಮಿಲಿಯನ್ ಅಂದರೆ 30.3 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆಯುವ ಮೂಲಕ ಜಾಗತಿಕ ದಾಖಲೆ ಬರೆದಿದೆ. ಈ ಹಿಂದೆ ಅಮೆರಿಕದ ಖ್ಯಾತ ಯೂಟ್ಯೂಬರ್ ಐಶೋ ಸ್ಪೀಡ್ ಹೆಸರಿನಲ್ಲಿದ್ದ 300 ಮಿಲಿಯನ್ ವೀಕ್ಷಣೆಗಳ ದಾಖಲೆಯನ್ನು ಪ್ರಧಾನಿ ಮೋದಿ ಈಗ ಸಲೀಸಾಗಿ ಅಳಿಸಿ ಹಾಕಿದ್ದಾರೆ. ಈ ಒಂದೇ ವಿಡಿಯೋದಿಂದಾಗಿ ರಾತ್ರೋರಾತ್ರಿ ಪ್ರಧಾನಿಯವರ ಖಾತೆಗೆ ಸುಮಾರು 10 ಲಕ್ಷ ಹೊಸ ಅನುಯಾಯಿಗಳು ಸೇರ್ಪಡೆಯಾಗಿದ್ದಾರೆ.
16 ಮಿಲಿಯನ್ ಲೈಕ್ಸ್ ಮತ್ತು ಭಾವನಾತ್ಮಕ ಧನ್ಯವಾದ
ಈ ಐತಿಹಾಸಿಕ ವಿಡಿಯೋ 1.6 ಕೋಟಿಗೂ ಹೆಚ್ಚು ಲೈಕ್ಸ್ ಹಾಗೂ 15 ಲಕ್ಷಕ್ಕೂ ಹೆಚ್ಚು ಕಾಮೆಂಟ್ ಪಡೆದುಕೊಂಡಿದ್ದು, ರಾಜಕೀಯ ವ್ಯಕ್ತಿಯೊಬ್ಬರ ಪೋಸ್ಟ್‌ಗೆ ಇಷ್ಟು ದೊಡ್ಡ ಮಟ್ಟದ ಸ್ಪಂದನೆ ಸಿಕ್ಕಿರುವುದು ಇದೇ ಮೊದಲು. ಈ ಅಭೂತಪೂರ್ವ ಬೆಂಬಲಕ್ಕೆ ಮರುದಿನವೇ ಸ್ಪಂದಿಸಿದ ಪ್ರಧಾನಿ ಮೋದಿ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ, ನಿಮ್ಮ ಪ್ರೀತಿ ಮತ್ತು ಸಕಾರಾತ್ಮಕ ಸಲಹೆಗಳು ನನಗೆ ಸ್ಫೂರ್ತಿ ನೀಡುತ್ತವೆ. ನಮ್ಮ ಸಂಬಂಧ ಹೀಗೆ ಆಳವಾಗಿ ಬೆಳೆಯುತ್ತಿರಲಿ ಎಂದು ಭಾವನಾತ್ಮಕವಾಗಿ ದೇಶದ ಯುವಜನತೆಗೆ ಧನ್ಯವಾದ ಅರ್ಪಿಸಿದ್ದಾರೆ.
ಯುವಜನತೆಯ ನಾಡಿಮಿಡಿತ ಅರಿತ ಮೋದಿ ತಂತ್ರ
ಪರೀಕ್ಷಾ ಅಕ್ರಮದಂತಹ ಗಂಭೀರ ವಿಷಯಗಳ ಬಗ್ಗೆ ಪ್ರಧಾನಿ ಕೇವಲ ಸರ್ಕಾರಿ ಪ್ರಕಟಣೆ ನೀಡದೆ, ಯುವಜನರು ಹೆಚ್ಚಾಗಿ ಬಳಸುವ ಇನ್‌ಸ್ಟಾಗ್ರಾಮ್ ವೇದಿಕೆಯನ್ನು ಆಯ್ದುಕೊಂಡಿದ್ದು ಈ ಯಶಸ್ಸಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಅದರಲ್ಲೂ ಯುವಜನರು ಮೊಬೈಲ್‌ನಲ್ಲಿ ಹೆಚ್ಚು ಸಕ್ರಿಯವಾಗಿರುವ ಮಧ್ಯರಾತ್ರಿಯ ಸಮಯವನ್ನೇ ಆಯ್ದುಕೊಂಡು ವಿಡಿಯೋ ಹಂಚಿಕೊಂಡಿದ್ದು, ಯುವಜನರೊಂದಿಗೆ ನೇರ ಸಂಪರ್ಕ ಸಾಧಿಸಲು ಸಹಕಾರಿಯಾಯಿತು.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇದು ಕೇವಲ ಅಂಕಿಅಂಶಗಳಲ್ಲ, ಬದಲಾಗಿ ಪ್ರಧಾನಿ ಮೋದಿ ಅವರು ಪ್ರತಿಯೊಂದು ಪೀಳಿಗೆಯ ಮತ್ತು ವರ್ಗದ ಜನರೊಂದಿಗೆ ಹೊಂದಿರುವ ಅವಿನಾಭಾವ ಸಂಬಂಧದ ಪುರಾವೆಯಾಗಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ವಿದೇಶಿ ಸೆಲೆಬ್ರಿಟಿಗಳನ್ನೇ ಮೀರಿಸುವ ಮೂಲಕ ಪ್ರಧಾನಿ ಮೋದಿ ಡಿಜಿಟಲ್ ಲೋಕದಲ್ಲಿ ತಮ್ಮ ಹವಾ ಎಷ್ಟಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.








