ಬೆಂಗಳೂರು: ದೇಶಾದ್ಯಂತ ಸಂಚಲನ ಮೂಡಿಸಿರುವ ನೀಟ್ ಪರೀಕ್ಷಾ ಅಕ್ರಮ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಯ ಬಗ್ಗೆ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಅತ್ಯಂತ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. ವಿದ್ಯಾರ್ಥಿಗಳ ಹೋರಾಟವನ್ನು ಬೆಂಬಲಿಸಿರುವ ಅವರು, ಪ್ರಶ್ನೆ ಕೇಳುವವರನ್ನು ಹಿಂದೂ ವಿರೋಧಿಗಳೆಂದು ಬಿಂಬಿಸುವ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಧೈರ್ಯವಂತ ವಿದ್ಯಾರ್ಥಿಗಳಿಗೆ ಸಪ್ತಮಿ ಸಾಥ್
ಹಿಂದೆ ನಮಗೆ ಇಷ್ಟು ಧೈರ್ಯ ಇರಲಿಲ್ಲ, ಆದರೆ ಇಂದಿನ ವಿದ್ಯಾರ್ಥಿಗಳು ಅನ್ಯಾಯದ ವಿರುದ್ಧ ಧೈರ್ಯ ಮಾಡಿ ಬೀದಿಗೆ ಇಳಿದಿದ್ದಾರೆ. ಅವರಿಗೆ ಕನಿಷ್ಠ ಉತ್ತರ ನೀಡುವ ಜವಾಬ್ದಾರಿ ಆಡಳಿತ ವ್ಯವಸ್ಥೆಗಿದೆ. ಕೇವಲ ರಾಜೀನಾಮೆಯಿಂದಲೇ ಸಿಸ್ಟಮ್ ಬದಲಾಗದೇ ಇರಬಹುದು, ಆದರೆ ತಪ್ಪು ಮಾಡಿದವರಿಗೆ ಶಿಕ್ಷೆಯ ಭಯ ಇರಬೇಕು. ಆಗ ಮಾತ್ರ ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳು ಮರುಕಳಿಸುವುದಿಲ್ಲ ಎಂದು ಸಪ್ತಮಿ ಗೌಡ ಅಭಿಪ್ರಾಯಪಟ್ಟಿದ್ದಾರೆ.
ಪ್ರಶ್ನೆ ಕೇಳಿದರೆ ಹಿಂದೂ ವಿರೋಧಿಯೇ?
ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ನಟಿ, ನಾನು ದೇವಿಯ ದರ್ಶನ ಪಡೆದು ಫೋಟೋ ಹಾಕುತ್ತೇನೆ, ಹಾಗಾದ್ರೆ ನಾನು ಹಿಂದೂ ವಿರೋಧಿಯೇ? ವ್ಯವಸ್ಥೆಯ ಲೋಪಗಳ ಬಗ್ಗೆ ಪ್ರಶ್ನೆ ಮಾಡಿದ ಕೂಡಲೇ ಹಿಂದೂ ವಿರೋಧಿ ಎಂಬ ಪಟ್ಟ ಕಟ್ಟುವುದು ಸರಿಯಲ್ಲ. ರಾಜಕೀಯ ಎಂಬುದು ಬೇರೆ, ಧರ್ಮ ಎಂಬುದು ನಮ್ಮ ವೈಯಕ್ತಿಕ ವಿಚಾರ. ಎರಡನ್ನೂ ಬೆರೆಸಿ ಗೊಂದಲ ಸೃಷ್ಟಿಸುವುದು ಬೇಡ ಎಂದು ಅವರು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ನನ್ನ ತಂಗಿಯೂ ನೀಟ್ ಓದುತ್ತಿದ್ದಾಳೆ
ಈ ಹೋರಾಟದ ಹಿಂದಿರುವ ನೋವನ್ನು ಹಂಚಿಕೊಂಡ ನಟಿ, ನನ್ನ ಸ್ವಂತ ತಂಗಿಯೂ ಕೂಡ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಳೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೋಚಿಂಗ್ ಪಡೆಯುವ ವಿದ್ಯಾರ್ಥಿಗಳ ಮತ್ತು ಸಾಲ ಮಾಡಿ ಓದಿಸುವ ಪೋಷಕರ ಕಷ್ಟ ನನಗೂ ಗೊತ್ತು. ಮೊದಲ ಬಾರಿ ಬಂದ ಅಂಕಗಳು ಮರು ಪರೀಕ್ಷೆಯಲ್ಲಿ ಬರುತ್ತವೆ ಎನ್ನುವ ಖಾತರಿ ಇಲ್ಲ. ರಾಜಕೀಯ ಗೊಂದಲಗಳಿಂದಾಗಿ ಮೆರಿಟ್ ವಿದ್ಯಾರ್ಥಿಗಳು ಬಲಿಪಶುಗಳಾಗುತ್ತಿದ್ದಾರೆ. ನಮ್ಮ ತೆರಿಗೆ ಹಣದಿಂದಲೇ ಇದೆಲ್ಲವೂ ನಡೆಯುತ್ತಿರುವುದರಿಂದ ಪ್ರಶ್ನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದಿದ್ದಾರೆ.
ಹೋಟೆಲ್ ಒಂದರಲ್ಲಿ ಊಟ ಸರಿಯಿಲ್ಲದಿದ್ದರೆ ಗ್ರಾಹಕರು ಮ್ಯಾನೇಜರ್ ಅನ್ನು ಹೇಗೆ ಪ್ರಶ್ನಿಸುತ್ತಾರೋ ಮತ್ತು ಆಡಳಿತ ಮಂಡಳಿ ಮ್ಯಾನೇಜರ್ ಅನ್ನು ಹೇಗೆ ಕೆಲಸದಿಂದ ತೆಗೆಯುತ್ತದೆಯೋ, ಅದೇ ರೀತಿ ಶಿಕ್ಷಣ ವ್ಯವಸ್ಥೆಯಲ್ಲಿ ಲೋಪವಾದಾಗ ಸಂಬಂಧಪಟ್ಟ ಸಚಿವರು ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎನ್ನುವುದು ವಿದ್ಯಾರ್ಥಿಗಳ ಹಕ್ಕೊತ್ತಾಯವಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಕೇಳದಿದ್ದರೆ ಸಮಸ್ಯೆಗಳು ಎಂದಿಗೂ ಬಗೆಹರಿಯುವುದಿಲ್ಲ ಎಂದು ಅವರು ವ್ಯವಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ರಾಜ್ಯ ಮಟ್ಟದಲ್ಲಿ ಪೇಪರ್ ಲೀಕ್ ಆದಾಗ ಜವಾಬ್ದಾರಿ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈಗ ಇಡೀ ದೇಶದಾದ್ಯಂತ ಇಂತಹ ಘಟನೆಗಳು ನಡೆಯುತ್ತಿರುವುದು ಆತಂಕಕಾರಿ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಸಮಸ್ಯೆ ಶೀಘ್ರವಾಗಿ ಬಗೆಹರಿಯಬೇಕು ಎಂದು ಸಪ್ತಮಿ ಗೌಡ ಆಗ್ರಹಿಸಿದ್ದಾರೆ. ಸದ್ಯ ನಟಿಯ ಈ ಖಡಕ್ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.








