
ಬೀಜಿಂಗ್, ಮೇ 25 : ಕೊರೋನಾ ವೈರಸ್ ಕಾರಣದಿಂದ ಅಮೆರಿಕ ಮತ್ತು ಚೀನಾದ ಸಂಬಂಧ ಬಿಗಡಾಯಿಸಿತು. ಇದೀಗ ಅದು ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು, ಶೀತಲ ಸಮರದತ್ತ ಸಾಗಿದೆ. ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು, ಕೊರೊನಾ ವೈರಸ್ ಉಗಮ ಯಾವುದು ಎಂದು ಕಂಡುಹಿಡಿಯುವ ಅಂತಾರಾಷ್ಟ್ರೀಯ ಪ್ರಯತ್ನಕ್ಕೆ ಚೀನಾ ಸಹಕಾರ ಕೊಡುವುದೆಂದು ಘೋಷಿಸಿದೆ. ಆದರೆ ಅಮೆರಿಕ ಚೀನಾದ ಮೇಲೆ ದೋಷಾರೋಪಣೆ ಮಾಡುತ್ತಾ ಅಮೆರಿಕ ರಾಜಕೀಯದ ವೈರಸ್ ಅನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ.
ಕೊರೋನಾ ವೈರಸ್ ಸೋಂಕಿನಿಂದ ಉಂಟಾಗಿರುವ ಜಾಗತಿಕ ಅರ್ಥಿಕ ಬಿಕ್ಕಟ್ಟನ್ನು ಶಮನಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಸಹಕಾರ ನೀಡಬೇಕು ಎಂದು ಚೀನಾ ಮನವಿ ಮಾಡಿರುವುದಾಗಿ ವರದಿಗಳು ತಿಳಿಸಿವೆ.ಕೊರೋನಾ ವೈರಸ್ ವಿಚಾರದಲ್ಲಿ ಅಮೆರಿಕ ರಾಜಕೀಯ ಮಾಡುತ್ತಿದ್ದು, ಸುಖಾಸುಮ್ಮನೇ ಚೀನಾದ ಮೇಲೆ ಆರೋಪ ಮಾಡುತ್ತಿದೆ. ಪ್ರತಿಯೊಂದು ಅವಕಾಶವನ್ನು ರಾಜಕೀಯ ಮಾಡಲು ಬಳಸಿಕೊಂಡು ನಮ್ಮ ಮೇಲೆ ದಾಳಿ ನಡೆಸುತ್ತಿದೆ. ಚೀನಾವನ್ನು ಅವಿಶ್ವಾಸಕ್ಕೆ ದೂಡಿ ರಾಜಕೀಯ ವೈರಸ್ ಅನ್ನು ಪಸರಿಸುತ್ತಿದೆ ಎಂದು ವಾಂಗ್ ಆರೋಪಿಸಿದರು.
ಈ ತಿಕ್ಕಾಟವನ್ನು ಶಮನ ಮಾಡಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದ ವಾಂಗ್ ಚೀನಾ ಮತ್ತು ಅಮೆರಿಕ ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದ್ದು, ಉಭಯ ದೇಶಗಳ ಆರ್ಥಿಕತೆ ಸುಧಾರಣೆಯ ಜೊತೆಗೆ ಜಾಗತಿಕ ಆರ್ಥಿಕತೆಯತ್ತ ಗಮನಹರಿಸಬೇಕಾಗಿದೆ ಎಂದು ವಾಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದೊಂದಿಗೆ ಎಲ್ಲಾ ರೀತಿಯ ಬಾಂಧವ್ಯವನ್ನು ಕಡಿದುಕೊಳ್ಳುವುದಾಗಿ ಇತ್ತೀಚೆಗಷ್ಟೇ ಸಂದರ್ಶನದಲ್ಲಿ ಹೇಳಿದ್ದರು.
ವಿಶ್ವವನ್ನು ಕಂಗೆಡಿಸಿರುವ ಕೊರೊನಾ ವೈರಸ್ ಸೋಂಕು ಚೀನಾದ ವುಹಾನ್ ನಿಂದ ಇತರ ರಾಷ್ಟ್ರಗಳಿಗೆ ಹರಡಿರುವುದಾಗಿ ಅಮೆರಿಕ ಸೇರಿದಂತೆ ಬಹುತೇಕ ರಾಷ್ಟ್ರಗಳು ಆರೋಪಿಸಿದ್ದವು. ಅಷ್ಟೇ ಅಲ್ಲ ಕೊರೊನಾ ಸೋಂಕಿನ ಮೂಲದ ತನಿಖೆಗೆ ಒತ್ತಾಯಿಸಿದ್ದವು.ಅಮೆರಿಕ ವುಹಾನ್ ನಗರದ ಪ್ರಯೋಗಾಲಯಕ್ಕೆ ಅಂತಾರಾಷ್ಟ್ರೀಯ ಸಮುದಾಯದ ತಜ್ಞರನ್ನು ತನಿಖೆ ನಡೆಸಲು ಕಳುಹಿಸಬೇಕೆಂದು ಅನೇಕ ಬಾರಿ ಒತ್ತಾಯಿಸಿತ್ತು. ಆದರೆ ಚೀನಾ ಇದಕ್ಕೆ ಅವಕಾಶ ನೀಡಿರಲಿಲ್ಲ. ಇದರಿಂದಾಗಿ ಚೀನಾ ಮತ್ತು ಅಮೆರಿಕ ನಡುವೆ ಶೀತಲ ಸಮರ ಪ್ರಾರಂಭವಾಗಿದೆ.








