ಕಿರುಕುಳ ತಾಳಲಾರದೆ ಪೊಲೀಸ್ ಕಾನ್ಸ್ಟೇಬಲ್ ಆತ್ಮಹತ್ಯೆ
ಗದಗ: ಕಿರುಕುಳಕ್ಕೆ ಬೇಸತ್ತು ಪೊಲೀಸ್ ಕಾನ್ಸ್ಟೇಬಲ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ.
ಕಾನ್ಸ್ಟೇಬಲ್ ಅರ್ಜುನ್ ಪಾಟೀಲ್ ಮೃತ ದುರ್ದೈವಿ. ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಅರ್ಜುನ, ಗದಗ ನಗರದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಆಗಿದ್ದರು. ಇವರು ಗುರುವಾರ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ದುಷ್ಕರ್ಮಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಮಾನಸಿಕ ಹಿಂಸೆ ತಾಳದೇ ಆತ್ಮಹತ್ಯೆ ಮಾಡಿಕೊಂಡಿದ್ದೇನೆ. ಎಂದು ಆರೇಳು ಪುಟಗಳ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಎಂದಿನಂತೆ ಡ್ಯೂಟಿಗೆ ಹೋಗಬೇಕು ಎಂದು ಊಟದ ಬಾಕ್ಸ್ ಕಟ್ಟಿಕೊಂಡಿದ್ದರು. ಪತ್ನಿ ಹಾಗೂ ತಂದೆ ತಾಯಿ ಸೇರಿದಂತೆ ಕುಟುಂಬಸ್ಥರು ಧಾರವಾಡಕ್ಕೆ ಹೋಗಿದ್ದರು. ಈ ವೇಳೆ, ಮನೆಯಲ್ಲಿ ಯಾರೂ ಇರಲಿಲ್ಲ. ಅರ್ಜುನ್ ಪಾಟೀಲ್ಗೆ ಯಾವುದೋ ಸಂದೇಶ ಬಂದಿದ್ದು, ಬಳಿಕ ಮನೆಯಲ್ಲೇ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅರ್ಜುನ್ ಪಾಟೀಲ್ಗೆ ಪತ್ನಿ, ಇಬ್ಬರು ಮಕ್ಕಳು, ತಂದೆ-ತಾಯಿ ಇದ್ದರು. ಲಕ್ಕುಂಡಿ ಗ್ರಾಮದಲ್ಲಿ ಪಾರ್ಥಿವ ಶರೀರಕ್ಕೆ ಪೊಲೀಸ್ ಇಲಾಖೆಯಿಂದ ಗೌರವ ಸಲ್ಲಿಸಲಾಯಿತು. ಡಿವೈಎಸ್ಪಿ ಶಿವಾನಂದ, ಸಿಪಿಐ ಸೇರಿದಂತೆ ಹಲವರು ಈ ವೇಳೆ ಭಾಗಿಯಾಗಿದ್ದರು. ಮಗನ ಕಳೆದುಕೊಂಡ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಆತ್ಮಹತ್ಯೆ ಸಂಬಂಧ ಗದಗ ಗ್ರಾಮೀಣ ಠಾಣೆಯಲ್ಲಿ ಕಿರುಕುಳ ನೀಡಿದ್ದ ಆರೋಪದ ಮೇಲೆ ಇಬ್ಬರು ಪತ್ರಕರ್ತರು, ಐವರು ಪೊಲೀಸರು ಸೇರಿ 9 ಜನರ ಮೇಲೆ ಪ್ರಕರಣ ದಾಖಲಾಗಿದೆ.








