ಸ್ಪೈಸ್ ಜೆಟ್ ವಿಮಾನ ನಿರ್ಗಮನ ವಿಳಂಬ – ನಿಲ್ದಾಣದಲ್ಲಿ ದಂಗೆ ಎದ್ದ ಪ್ರಯಾಣಿಕರು…
ಗುರುವಾರ ಸಂಜೆ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ಪ್ರಯಾಣಿಕರು ಪ್ರತಿಭಟನೆ ನಡೆಸಿ ಗಲಾಟೆ ಉಂಟುಮಾಡಿದ್ದಾರೆ. ವಿಮಾನ ಹೊರಡುವ ಸಮಯ 5 ಗಂಟೆ ತಡವಾಗಿದ್ದರಿಂದ ಪ್ರಯಾಣಿಕರು ರೊಚ್ಚಿಗೆದ್ದಿದ್ದಾರೆ. ಸ್ಪೈಸ್ ಜೆಟ್ ಫ್ಲೈಟ್ SG-756 ವಿಮಾನ ಹೊರಡುವ ಸಮಯ ಮಧ್ಯಾಹ್ನ 3:05 ಗಂಟೆಗೆ ನಿಗಧಿಯಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ವಿಮಾನ ನಿರ್ಗಮನ ಸಮಯವನ್ನು 7:30 ಕ್ಕೆ ಹೆಚ್ಚಿಸಲಾಯಿತು.
5 ಗಂಟೆಗೂ ಹೆಚ್ಚು ಕಾಲ ತಡವಾಯಿತಾದರೂ ಪ್ರಯಾಣಿಕರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಪ್ರಯಾಣಿಕರು ಸ್ಪೈಸ್‌ಜೆಟ್ ಉದ್ಯೋಗಿಗಳೊಂದಿಗೆ ವಾಗ್ವಾದ ನಡೆಸಿದರು. ವಿವಾದ ಉಲ್ಬಣಗೊಳ್ಳುತ್ತಿರುವುದನ್ನು ಕಂಡು ಸ್ಪೈಸ್ ಜೆಟ್ ಅಧಿಕಾರಿಗಳು ತಮ್ಮ ಫೋನ್ ಸ್ವಿಚ್ ಆಫ್ ಮಾಡಿ ಅಲ್ಲಿಂದ ನಾಪತ್ತೆಯಾಗಿದ್ದಾರೆ. ನಮ್ಮ ವಿಮಾನ ಹಾರುವವರೆಗೆ ಬೇರೆ ಯಾವುದೇ ವಿಮಾನ ಟೇಕಾಫ್ ಆಗುವುದಿಲ್ಲ ಎಂದು ಪ್ರಯಾಣಿಕರು ಹೇಳಿದ್ದಾರೆ.
ಗಲಾಟೆ ನಡೆದರೂ ಪ್ರಯಾಣಿಕರ ಮಾತು ಕೇಳುವವರೇ ಇರಲಿಲ್ಲ. ಎಲ್ಲಾ ಪ್ರಯಾಣಿಕರ ಕೋಪ ಮಿತಿ ಮೀರಿದಾಗ ಆಕ್ರೋಶಗೊಂಡ ಪ್ರಯಾಣಿಕರು ಮುಖ್ಯದ್ವಾರವನ್ನೇ ಮುಚ್ಚಿದರು. ಆ ನಂತರ ಗಲಾಟೆ ಶುರುವಾಯಿತು. ಇದರಿಂದಾಗಿ ಎರಡನೇ ವಿಮಾನದ ಕಾರ್ಯಾಚರಣೆಯೂ ಅಸ್ತವ್ಯಸ್ತಗೊಂಡಿತು. ಎರಡನೇ ವಿಮಾನ ನೀಡಿದಾಗ ಆ ವಿಮಾನದ ಪ್ರಯಾಣಿಕರು ಮೊದಲ ವಿಮಾನದ ಪ್ರಯಾಣಿಕರೊಂದಿಗೆ ಕಿಕ್ಕಿರಿದು ತುಂಬಿದರು. ಈ ವೇಳೆ ಎರಡೂ ವಿಮಾನಗಳ ಪ್ರಯಾಣಿಕರು ಪರಸ್ಪರ ಮಾತಿನ ಚಕಮಕಿ ನಡೆಸಿದರು. ಘಟನೆ ಕುರಿತು ಮಾಹಿತಿ ಪಡೆದ ಸಿಐಎಸ್‌ಎಫ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪ್ರಯಾಣಿಕರನ್ನು ಸಮಾಧಾನಪಡಿಸಿದರು.








