ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಅಬ್ಬರ ಜೋರಾಗಿದ್ದು, ಸತತ ಎರಡನೇ ದಿನವೂ ಆರು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ನೋಡ ನೋಡುತ್ತಿದ್ದಂತೆ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದು, ಸೋಂಕು ಪೀಡಿತ ಅಗ್ರ ಹತ್ತು ದೇಶಗಳ ಪಟ್ಟಿಯಲ್ಲಿ ಭಾರತವೂ ಗುರುತಿಸಿಕೊಂಡಿದೆ.
ಫೆಬ್ರವರಿ ಆರಂಭದಲ್ಲಿ ಕಾಣಿಸಿಕೊಂಡ ಈ ಹೆಮ್ಮಾರಿ ನಾಲ್ಕೇ ತಿಂಗಳ ಅವಧಿಯಲ್ಲಿ ನೋಡ ನೋಡುತ್ತಿದ್ದಂತೆಯೇ ಲಕ್ಷದ ಗಡಿ ದಾಟಿ ಅಬ್ಬರಿಸುತ್ತಿದೆ. ಪ್ರತಿದಿನಕ್ಕೆ ಐದಾರು ಸಾವಿರ ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಳ್ತಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ.
ಮೊನ್ನೆಯಷ್ಟೇ 82,974 ಪ್ರಕರಣಗಳು ಪತ್ತೆಯಾಗುವ ಮೂಲಕ ಚೀನಾ ದಾಖಲೆ ಮುರಿದಿದ್ದ ಭಾರತ ಒಂದು ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿ ಪೇರು ದೇಶದ ದಾಖಲೆ ಮುರಿದಿತ್ತು. ಇದೀಗ ವಿಶ್ವದ ಟಾಪ್ ಟೆನ್ ಕೊರೊನಾ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿದೆ.
ಅತೀ ಹೆಚ್ಚು ಸೋಂಕು ಕಾಣಿಸಿಕೊಂಡಿರುವ ದೇಶಗಳು :
ಅತೀ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ದೇಶಗಳ ಪೈಕಿ ಅಮೆರಿಕಾ ಮೊದಲ ಸ್ಥಾನದಲ್ಲಿದೆ. ಅಮೆರಿಕದಲ್ಲಿ ಸರಿಸುಮಾರು 16 ಲಕ್ಷ ಸೋಂಕಿತರಿದ್ದರೆ ಇದರಲ್ಲಿ 98,740 ಜನ ಸಾವನ್ನಪ್ಪಿದ್ದಾರೆ. ಎರಡನೇ ಸ್ಥಾನದಲ್ಲಿ ಬ್ರೆಜಿಲ್ ಇದ್ದು, 3 ಲಕ್ಷದ 49 ಸಾವಿರ ಮಂದಿ ಕೊರೊನಾ ಪೀಡಿತರಿದ್ದಾರೆ. ರಷ್ಯಾ 3 ಲಕ್ಷದ 44 ಸಾವಿರ, ಸ್ಪೇನ್ ನಲ್ಲಿ 2 ಲಕ್ಷದ 82 ಸಾವಿರ, ಯುಕೆಯಲ್ಲಿ 2 ಲಕ್ಷದ 57 ಸಾವಿರ, ಇಟಲಿಯಲ್ಲಿ 2 ಲಕ್ಷದ 29 ಸಾವಿರ ಕೊರೊನಾ ಬಾಧಿತರಾಗಿದ್ದಾರೆ. ಫ್ರಾನ್ ನಲ್ಲಿ 1 ಲಕ್ಷದ 82 ಸಾವಿರ ಮಂದಿ, ಜರ್ಮನಿಯಲ್ಲಿ 1 ಲಕ್ಷದ 80 ಸಾವಿರ, ಟರ್ಕಿ 1 ಲಕ್ಷದ 55 ಸಾವಿರ ಮಂದಿಗೆ ಸೋಂಕಿಗೆ ತುತ್ತಾಗಿದ್ದಾರೆ. ಇರಾನ್ ನಲ್ಲಿ 1 ಲಕ್ಷದ 35 ಸಾವಿರದ 701 ಮಂದಿ ಸೋಂಕಿಗೆ ತುತ್ತಾಗಿದ್ದರೆ, ಭಾರತ ಅದರ ನಂತರದ ಅಂದ್ರೆ 1 ಲಕ್ಷದ 38 ಸಾವಿರಕ್ಕೂ ಹೆಚ್ಚು ಮಂದಿ ಸೋಂಕು ಪೀಡಿತರಾಗಿದ್ದಾರೆ.
ಮೇ ಅಂತ್ಯಕ್ಕೆ ಟಾಪ್-5ನಲ್ಲಿ ಭಾರತ..?
ಭಾರತ ಸದ್ಯ 10ನೇ ಸ್ಥಾನದಲ್ಲಿದ್ದು, ತಜ್ಞರು ಹೇಳುವ ಪ್ರಕಾರ ಕೊರೊನಾ ವೈರಸ್ ಸೋಂಕು ನಿಲ್ಲುವ ಲಕ್ಷಣಗಳು ಕಾಣ್ತಿಲ್ಲ. ದಿನವೊಂದಕ್ಕೆ ಆರು ಸಾವಿರ ಪ್ರಕರಣಗಳು ಭಾರತದಲ್ಲಿ ಸದ್ಯ ಪತ್ತೆಯಾಗುತ್ತಿದ್ದು, ಹೀಗೆ ಮುಂದುವರಿದ್ರೆ ಮೇ ಅಂತ್ಯದ ವೇಳೆಗೆ ಟಾಪ್ 5 ಸ್ಥಾನದಲ್ಲಿರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.








