ಮುಂಬೈ, ಮೇ 25 : ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಾಂಗ್ರೆಸ್ ಮುಖಂಡ, ಲೋಕೋಪಯೋಗಿ ಸಚಿವ ಅಶೋಕ್ ಚವಾಣ್ ಅವರಲ್ಲಿ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದಿದ್ದರೂ ಕೊರೊನಾ ಪರೀಕ್ಷೆ ನಡೆಸಲಾಯಿತು. ಪರೀಕ್ಷೆಯಲ್ಲಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಅಶೋಕ್ ಚವಾಣ್ ಅವರನ್ನು ಮಹಾರಾಷ್ಟ್ರದ ನಾಂದೇಡ್ನ ಆಸ್ಪತ್ರೆಯಲ್ಲಿ ಐಸೋಲೇಷನ್ನಲ್ಲಿ ಇಡಲಾಗಿದೆ.
ಅಶೋಕ್ ಚವಾಣ್ ಅವರಿಗೆ ಹೇಗೆ ಕೊರೊನಾ ಸೋಂಕು ತಗುಲಿತು ಎಂಬುವುದು ನಿಖರವಾಗಿ ಇನ್ನೂ ಗೊತ್ತಾಗಿಲ್ಲ, ಆದರೆ ಅವರು ಮುಂಬೈ ಮತ್ತು ಅವರ ಊರು ಮರಾಠವಾಡದ ಮಧ್ಯೆ ಆಗಾಗ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಆ ಸಮಯದಲ್ಲಿ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಈ ಹಿಂದೆ ಎನ್ಸಿಪಿ ಮುಖಂಡ ಮತ್ತು ವಸತಿ ಸಚಿವ ಜಿತೇಂದ್ರ ಅವದ್ ಅವರಲ್ಲಿ ಕೂಡ ಕೊರೊನಾ ಸೋಂಕು ದೃಢಪಟ್ಟಿತ್ತು. ಮುಂಬೈನ ಆಸ್ಪತ್ರೆಯಲ್ಲಿ ಎರಡು ವಾರಗಳಿಗಿಂತ ಹೆಚ್ಚು ಕಾಲ ದಾಖಲಾಗಿ ಚಿಕಿತ್ಸೆ ಪಡೆದ ನಂತರ ಅವರು ಚೇತರಿಸಿಕೊಂಡರು. ಮಹಾರಾಷ್ಟ್ರದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಭಾನುವಾರ 50,000 ದಾಟಿದ್ದು, ಒಂದೇ ದಿನದಲ್ಲಿ 3,041 ಹೊಸ ಪ್ರಕರಣಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಪತ್ತೆಯಾದ ಕೋವಿಡ್ -19 ಪ್ರಕರಣಗಳ ಸಂಖ್ಯೆ ಈಗ 50,231 ರಷ್ಟಿದ್ದರೆ, ಚೇತರಿಸಿಕೊಂಡ ರೋಗಿಗಳ ಸಂಖ್ಯೆ 14,600 ಕ್ಕೆ ತಲುಪಿದೆ. ಸಾವಿನ ಸಂಖ್ಯೆ 1,635 ಕ್ಕೆ ಏರಿದೆ.








