ಖಾಸಗಿ ಬಸ್ ಪಲ್ಟಿ – ಮೃತರ ಕುಟುಂಬಸ್ಥರಿಗೆ ʼ5 ಲಕ್ಷʼ ಪರಿಹಾರ ಘೋಷಣೆ
ತುಮಕೂರಿನಲ್ಲಿ ಖಾಸಗಿ ಬಸ್ ಪಲ್ಟಿಯಾಗಿ 8 ಜನ ಸಾವನ್ನಪ್ಪಿದ್ದು 25ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ʼರಾಜ್ಯ ಸರ್ಕಾರʼದಿಂದ ಮೃತರ ಕುಟುಂಬಸ್ಥರಿಗೆ ʼ5 ಲಕ್ಷʼ ಪರಿಹಾರ ಘೋಷಣೆ ಮಾಡಲಾಗಿದೆ.
ಪರಿಹಾರದ ಕುರಿತು ಸಾರಿಗೆ ಇಲಾಖೆಯ ಸಚಿವ ಬಿ.ಶ್ರೀರಾಮುಲು ಘೋಷಣೆ ಮಾಡಿದ್ದು, ದುರಂತದಲ್ಲಿ ಸಾವನ್ನಪ್ಪಿರುವ ಪ್ರಯಾಣಿಕರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ನೀಡಲಾಗುವುದು ಗಾಯಾಳುಗಳಿಗೆ ತಲಾ 50 ಸಾವಿರ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ ರಾಮುಲು 1ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಅಂದ್ಹಾಗೆ, ಇಂದು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿಕಟ್ಟೆ ಬಳಿ ಇಂದು ಬೆಳಗ್ಗೆ ಖಾಸಗಿ ಬಸ್ ಪಲ್ಟಿಯಾಗಿ 8 ಜನರು ಮೃತಪಟ್ಟಿದ್ದು, ಇವರಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ಕಾಲೇಜು ವಿದ್ಯಾರ್ಥಿಗಳು ಸೇರಿ ನೂರಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು, ಬಸ್ ಚಾಲಕ ವೇಗವಾಗಿ ಚಲಾಯಿಸುತ್ತಿದ್ದರಿಂದ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಕಾಲೇಜಿಗೆ ಮತ್ತು ಕೆಲಸಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿದ್ದಿದದ್ದರಿಂದ ಬಸ್ ಓವರ್ ಲೋಡ್ ಆಗಿತ್ತು. ಅಲ್ಲದೆ ಬಸ್ ಟಾಪ್ ನಲ್ಲಿ ಸಹ ಪ್ರಯಾಣಿಕರು ಕುಳಿತಿದ್ದರು.








