Bangalore | ಎಲ್ಲ ವರ್ಗದ ಮಕ್ಕಳಿಗೂ ಉತ್ತಮ ಶಿಕ್ಷಣ ಲಭ್ಯವಾಗಬೇಕು : ಸಚಿವ ವಿ.ಸೋಮಣ್ಣ
ಬೆಂಗಳೂರು : ಬಡ ಹಾಗೂ ಸಾಮಾನ್ಯ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ಲಭ್ಯವಾಗಬೇಕೆಂಬುದೇ ನನ್ನ ಆಶಯ ಎಂದು ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಡಾ.ರಾಜ್ಕುಮಾರ್ ವಾರ್ಡ್ನ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ನೂತನವಾಗಿ ನಿರ್ಮಿಸಲಾದ ಶಾಲಾ ಕಟ್ಟಡವನ್ನುದ್ಘಾಟಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಸುಸಜ್ಜಿತ ಶಾಲಾ ಕಟ್ಟಡದ ಅವಶ್ಯಕತೆ ಇತ್ತು. ಹೀಗಾಗಿ ಮುತುವರ್ಜಿ ವಹಿಸಿ ಈ ಶಾಲಾ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದರು.
ಕೇವಲ ಶಿಕ್ಷಣ ನೀಡುವುದು, ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಆದ್ಯತೆಯಾಗಿರಬಾರದು, ಮೌಲ್ಯಗಳಿಂದ ಕೂಡಿದ ಗುಣಮಟ್ಟದ ಶಿಕ್ಷಣ ನೀಡುವುದು ಗುರಿಯಾಗಿರಬೇಕು. ಶಾಲಾ ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನು ತುಂಬಿ ಅವರನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿದರೆ ಶಿಕ್ಷಣದ ನಿಜವಾದ ಉದ್ದೇಶ ಈಡೇರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಬಳಿಕ ಕೆನರಾ ಬ್ಯಾಂಕ್ ಕಾಲೋನಿಯಲ್ಲಿ ನೂತನವಾಗಿ ನಿರ್ಮಿಸಿದ ಕೆನರಾ ಬ್ಯಾಂಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವಿವಿಧೋದ್ದೇಶ ಕಟ್ಟಡ ಹಾಗೂ ಶ್ರೀ ಅಮ್ಮೆಂಬಳ್ ಸುಬ್ಬರಾವ್ ಪೈ ಸ್ಮಾರಕ ಕಲಾ ಮಂಟಪವನ್ನು ಸಚಿವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಮುನಿರತ್ನ ಮಾತನಾಡಿ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಭ್ಯುದಯಕ್ಕೆ ವಿ.ಸೋಮಣ್ಣ ಅವರೇ ಕಾರಣ. ಇಂಥ ದೂರದೃಷ್ಟಿಯ ನಾಯಕರನ್ನು ಪಡೆದ ಕಾರಣ ಈ ಕ್ಷೇತ್ರ ಇಂದು ಮಾದರಿ ಕ್ಷೇತ್ರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಅ.ದೇವೇಗೌಡ, ಬಿಜೆಪಿ ಯುವ ಮುಖಂಡ ಡಾ.ಅರುಣ್ ಸೋಮಣ್ಣ ಸೇರಿದಂತೆ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. bangalore-A good education should be available to all classes of children: Minister V. Somanna









