ಭಾರತದಲ್ಲಿ ಜಪಾನ್ ಮುಂದಿನ ಐದು ವರ್ಷಗಳಲ್ಲಿ 3.2 ಲಕ್ಷಕೋಟಿ ಹೂಡಿಕೆಗೆ ನಿರ್ಧಾರ
ನವದೆಹಲಿ: ಮುಂದಿನ ಐದು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ 3.2 ಲಕ್ಷಕೋಟಿ ಬಂಡವಾಳ ಹೂಡಿಕೆ ಮಾಡುವುದಾಗಿ ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಘೋಷಣೆ ಮಾಡಿದ್ದಾರೆ.
14 ನೇ ಇಂಡೋ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ ಜಪಾನ್ ಪ್ರಧಾನಿ ಕಿಶಿದಾ ಈ ವಿಚಾರ ಘೋಷಿಸಿದ್ದಾರೆ.
ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ, ವಿಶ್ವ ಕೊರೊನಾ ಮಹಾಮಾರಿಯ ಹೊಡೆತದಿಂದ ಮೇಲೆದ್ದು ಇದೀಗ ಅಭಿವೃದ್ಧಿಯತ್ತ ಸಾಗುತ್ತಿದೆ. ಜಾಗತಿಕ ಆರ್ಥಿಕತೆ ಮತ್ತೆ ಪ್ರಗತಿಯತ್ತ ಮುನ್ನುಗ್ಗುತ್ತಿದೆ. ಇದೀಗ ಪ್ರಗತಿ, ಸೌಹಾರ್ದತೆ ಮತ್ತು ಪಾಲುದಾರಿಕೆ ಭಾರತ-ಜಪಾನ್ ಸಂಬಂಧದ ಮೂಲವಾಗುತ್ತಿದೆ ಎಂದು ತಿಳಿಸಿದರು.
ಭಾರತದಲ್ಲಿ ದೊಡ್ಡ ಹೂಡಿಕೆಯ ರಾಷ್ಟ್ರಗಳಲ್ಲಿ ಜಪಾನ್ ಕೂಡ ಒಂದಾಗಿದ್ದು, ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್ನ ಒನ್ ಟೀಮ್-ಒನ್ ಪ್ರಾಜೆಕ್ಟ್ ರೀತಿಯಲ್ಲಿ ಭಾರತ-ಜಪಾನ್ ಕಾರ್ಯನಿರ್ವಹಿಸುತ್ತಿದೆ. ಭಾರತದೊಂದಿಗೆ ಸೈಬರ್ ಭದ್ರತೆಯಲ್ಲಿ ಸಹಕಾರದ ಜಪಾನ್ನ ಒಪ್ಪಂದವನ್ನು ನಾವು ಸ್ವಾಗತಿಸುತ್ತೇವೆ. ಶೀಘ್ರದಲ್ಲಿಯೇ ಈ ಬಗ್ಗೆ ಮುಂದಿನ ಮಾತುಕತೆ ನಡೆಸುತ್ತೇವೆ. ಭಾರತ ಜಪಾನಿನ ಅತ್ಯಂತ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ ಎಂದರು.
ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಮಾತನಾಡಿ, ಭಾರತದೊಂದಿಗೆ ಸೇರಿ ಉಕ್ರೇನ್ನಲ್ಲಿ ನಡೆಯುತ್ತಿರುವ ರಷ್ಯಾ-ಉಕ್ರೇನ್ ನಡುವಿನ ಯುದ್ಧ ನಿಲ್ಲಿಸಲು ಪ್ರಯತ್ನಿಸುತ್ತೇವೆ. ಉಕ್ರೇನ್ ಮತ್ತು ಅದರ ನೆರೆಯ ರಾಷ್ಟ್ರಗಳಿಗೆ ನೆರವು ನೀಡಲು ಸಹಕರಿಸುತ್ತೇವೆ ಎಂದರು.









