ಬೆಂಗಳೂರು, ಮೇ 25 : ಕಳೆದ ಎರಡು ತಿಂಗಳಿನಿಂದ ಸ್ಥಗಿತವಾಗಿದ್ದ ಧಾರಾವಾಹಿ ಚಿತ್ರೀಕರಣಗಳು ಇಂದಿನಿಂದ ಪುನರಾರಂಭವಾಗುತ್ತಿವೆ. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾರ್ಚ್ 19 ರಿಂದ ಧಾರಾವಾಹಿ, ಸಿನಿಮಾ ಶೂಟಿಂಗ್ ಸ್ಥಗಿತಗೊಂಡಿತ್ತು. ಮೂಲಗಳ ಪ್ರಕಾರ ಲಾಕ್ ಡೌನ್ ನಿಂದಾಗಿ ಅಂದಾಜು 120 ಧಾರಾವಾಹಿಗಳು ಚಿತ್ರೀಕರಣವನ್ನು ನಿಲ್ಲಿಸಿದ್ದವು. ಅನೇಕ ಕಲಾವಿದರು, ತಂತ್ರಜ್ಞರು ಕಿರುತೆರೆಯನ್ನು ಅವಲಂಬಿಸಿದ್ದು, ಕೊರೊನಾದಿಂದಾಗಿ ಸಂಕಷ್ಟಕ್ಕೀಡಾಗಿದ್ದರು. ಹೀಗಾಗಿ ಟೆಲಿವಿಷನ್ ಅಸೋಸಿಯೇಷನ್ ಮಾರ್ಗಸೂಚಿ ಪ್ರಕಾರ ಚಿತ್ರೀಕರಣ ಮಾಡುವಂತೆ ಸೂಚನೆ ನೀಡಲಾಗಿದೆ.
ಟೆಲಿವಿಷನ್ ಅಸೋಸಿಯೇಷನ್ ಸೂಚನೆಗಳೇನು?
ಶೂಟಿಂಗ್ ಗೆ ಅನುಮತಿ ನೀಡಿರುವ ಟೆಲಿವಿಷನ್ ಅಸೋಸಿಯೇಷನ್ ಕೆಲ ಮಾರ್ಗಸೂಚಿಗಳನ್ನು ಪಾಲಿಸುವಂತೆ ತಿಳಿಸಿದೆ. ಅದುವೇ ಸಾಮಾಜಿಕ ಅಂತರ ಕಾಯ್ದುಕೊಂಡು ಚಿತ್ರೀಕರಣ ಮಾಡುವುದು. ಶೂಟಿಂಗ್ ಲೋಕೇಷನ್ ಗಳಲ್ಲಿ 20ಕ್ಕಿಂತ ಅಧಿಕ ತಂತ್ರಜ್ಞರು, ಕಲಾವಿದರು ಸೇರದಂತೆ ಎಚ್ಚರಿಕೆ ವಹಿಸಬೇಕು. ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ಅಲ್ಲದೇ ಪ್ರತಿ ಎರಡು ಗಂಟೆಗೊಮ್ಮೆ ಟೆಂಪರೇಚರ್ ಟೆಸ್ಟ್ ವರದಿಯನ್ನು ಚಾನಲ್ ಗೆ ಹಾಗೂ ಪ್ರೊಡಕ್ಷನ್ ಕಂಪನಿಗೆ ಕಳುಹಿಸಬೇಕು ಎಂದು ಟೆಲಿವಿಷನ್ ಅಸೋಸಿಯೇಷನ್ ಸೂಚಿಸಿದೆ.
ಇದಷ್ಟೇ ಅಲ್ಲದೇ ಮೇಕಪ್ ವಸ್ತುಗಳನ್ನು ಕಲಾವಿದರೇ ತರುವಂತೆ ಹೊಸ ರೂಲ್ಸ್ ಮಾಡಲಾಗಿದೆ. ಚಿತ್ರೀಕರಣದಲ್ಲಿ ಭಾಗಿಯಾಗುವ ಪ್ರತಿಯೊಬ್ಬರಿಗೂ ಇನ್ಸೂರೆನ್ಸ್ ಮಾಡಲು ಕೂಡ ಪ್ಲಾನ್ ಮಾಡಲಾಗಿದೆ. ಇಂದಿನಿಂದ ಧಾರಾವಾಹಿ ಶೂಟಿಂಗ್ ಆರಂಭವಾಗಿದ್ದು, ಜೂನ್ 1ರಿಂದ ವಿವಿಧ ಧಾರಾವಾಹಿಗಳ ಹೊಸ ಎಪಿಸೋಡ್ ಗಳು ಟೆಲಿಕಾಸ್ಟ್ ಆಗಲಿವೆ.








