ಲಖನೌ, ಮೇ 25 : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ವಲಸೆ ಕಾರ್ಮಿಕರನ್ನು ಬೇರೆ ಯಾವುದೇ ರಾಜ್ಯಗಳಿಗೆ ಕರೆದೊಯ್ಯಬೇಕಾದ್ದಲ್ಲಿ ಸರ್ಕಾರದ ಅನುಮತಿ ಪಡೆಯಬೇಕು ಎಂದು ಸೂಚಿಸಿದ್ದಾರೆ. ನಮ್ಮ ರಾಜ್ಯದ ವಲಸೆ ಕಾರ್ಮಿಕರ ರಕ್ಷಣೆಗೆ ಸಂಬಂಧ ಪಟ್ಟಂತೆ ಬೇರೆ ರಾಜ್ಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಕಾನೂನು ಕ್ರಮ ಹಾಗೂ ಅವರ ಆರ್ಥಿಕ ಹಕ್ಕುಗಳ ಕುರಿತಾಗಿ ನಾವು ತಿಳಿಯಬೇಕಾಗಿದೆ. ಏಕೆಂದರೆ ಲಾಕ್ ಡೌನ್ ಜಾರಿಯಾದ ಸಮಯದಲ್ಲಿ ಬೇರೆ ರಾಜ್ಯಗಳು ಸಂಕಷ್ಟದಲ್ಲಿದ್ದ ನಮ್ಮ ರಾಜ್ಯದ ವಲಸೆ ಕಾರ್ಮಿಕರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಯೋಗಿ ಆದಿತ್ಯನಾಥ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇವರು ನಮ್ಮವರು.ಇವರಿಗೆ ಉದ್ಯೋಗ ದೊರಕಿಸಿಕೊಡಲು ನಾವು ಬದ್ಧರಾಗಿದ್ದೇವೆ. ನಮ್ಮ ಬಹುದೊಡ್ಡ ಸಂಪನ್ಮೂಲ ನಮ್ಮ ರಾಜ್ಯದ ವಲಸೆ ಕಾರ್ಮಿಕರು. ಹೀಗಾಗಿ ಅವರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಆಯೋಗವೊಂದನ್ನು ರಚನೆ ಮಾಡಲಾಗುವುದು ಎಂದು ಅವರು ತಿಳಿಸಿದರು. ಈ ನಿಟ್ಟಿನಲ್ಲಿ ವಲಸೆ ಕಾರ್ಮಿಕರ ಅಭಿಪ್ರಾಯಗಳನ್ನು ಸಂಗ್ರಹ ಮಾಡಲಾಗುತ್ತಿದ್ದು, ಅವರ ಕೌಶಲ್ಯವನ್ನು ಗುರುತಿಸಿ ನೋಂದಣಿ ಮಾಡಲಾಗುತ್ತಿದೆ ಎಂದು ತಿಳಿಸಿದರು. ಎಲ್ಲಾ ವಲಸೆ ಕಾರ್ಮಿಕರನ್ನು ನೋಂದಣಿ ಮಾಡಿಸಿ ಕೊಳ್ಳಲಾಗುತ್ತಿದ್ದು, ಇನ್ನು ಮುಂದೆ ಬೇರೆ ರಾಜ್ಯಗಳು ಅವರನ್ನು ಕರೆದೊಯ್ಯಬೇಕಾದರೆ ಅವರಿಗೆ ಒದಗಿಸುವ ಆರ್ಥಿಕ ಭದ್ರತೆ, ಸಾಮಾಜಿಕ ಅಂತರಗಳ ಬಗ್ಗೆ ಖಾತರಿಪಡಿಸಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಿಳಿಸಿದ್ದಾರೆ.








