ಉತ್ತರಪ್ರದೇಶ ಮೇ 26 : ದೇಶದಲ್ಲಿ ಕೊರೊನಾ ವೈರಸ್ ಆರ್ಭಟ ಮುಂದುವರಿದಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಲಾಕ್ ಡೌನ್ 4.0 ಸಡಿಲಿಕೆ ಬಳಿಕ ಗಣನೀಯ ಪ್ರಮಾಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಏತನ್ಮಧ್ಯೆ ಉತ್ತರಪ್ರದೇಶದಲ್ಲಿ 10 ಲಕ್ಷ ಕೊರೊನಾ ಸೋಂಕಿತರು ಇದ್ದಾರಾ ಅನ್ನೋ ಪ್ರಶ್ನೆ ಮೂಡಿದೆ.
ಹೌದು..! ಸದ್ಯ ಉತ್ತರಪ್ರದೇಶದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ದಿನೇ ದಿನೇ ಅಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ನೀಡಿದ ಹೇಳಿಕೆ ಒಂದು, ಉತ್ತರ ಪ್ರದೇಶದಲ್ಲಿ 10 ಲಕ್ಷ ಕೊರೊನಾ ಸೋಂಕಿತರಿದ್ದಾರಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.
ಯೋಗಿ ಹೇಳಿದ್ದೇನು?
ಸದ್ಯ ಉತ್ತಪ್ರದೇಶಕ್ಕೆ ದೇಶದ ವಿವಿಧೆಡೆಯಿಂದ 25 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ವಾಪಸ್ ಆಗಿದ್ದಾರೆ. ಹೀಗೆ ಹಿಂದಿರುಗಿದವರ ಪೈಕಿ ಮುಂಬೈನಿಂದ ಬಂದಿರುವ ಶೇಕಡ 75ರಷ್ಟು ಜನರಲ್ಲಿ ಕೊರೊನಾ ಇದೆ. ಅಲ್ಲದೆ, ದೆಹಲಿಯಿಂದ ಬಂದ ಶೇ 50 ಮತ್ತು ಉಳಿದ ಪ್ರದೇಶಗಳಿಂದ ಬಂದಿರುವ ಶೇ 25ರಷ್ಟು ಜನರಲ್ಲಿ ಕೊರೊನಾ ಸೋಂಕಿತರಿದ್ದಾರೆ ಎಂದು ಯೋಗಿ ಅವರು ಹೇಳಿದ್ದಾರೆ.
ಯುಪಿ ಸಿಎಂರ ಈ ಹೇಳಿಕೆ ಈಗ ಹಲ್ ಚಲ್ ಸೃಷ್ಟಿಸಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದ್ದು, ತೀವ್ರ ಆತಂಕಕ್ಕೂ ಕಾರಣವಾಗಿದೆ.
ಯೋಗಿಗೆ ಪ್ರಿಯಾಂಕಾ ವಾದ್ರಾ ಪ್ರಶ್ನೆ!
ಉತ್ತರಪ್ರದೇಶದ ಸಿಎಂ ಯೋಗಿ ಹೇಳಿಕೆ ಬಗ್ಗೆ ಕಿಡಿಕಾರಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ಸಿಎಂ ನೀಡಿರುವ ಲೆಕ್ಕದ ಪ್ರಕಾರ ಯುಪಿಯಲ್ಲಿ 10 ಲಕ್ಷ ಕೊರೊನಾ ಸೋಂಕಿತರು ಇದ್ದಾರೆ ಎಂದಾಯ್ತು. ಹಾಗಾದರೆ ಸರ್ಕಾರಿ ಲೆಕ್ಕದಲ್ಲಿ 6,228 ಮಂದಿ ಸೋಂಕಿತರು ಎಂದು ಯಾಕೆ ತೋರಿಸ್ತಿದ್ದೀರಿ. ಶೇಕಡವಾರು ಲೆಕ್ಕ ನಿಮಗೆಲ್ಲಿಂದ ಸಿಕ್ಕಿದೆ. ಅದಕ್ಕೆ ಆಧಾರ ಏನು ಎಂದು ಪ್ರಶ್ನಿಸಿದ್ದಾರೆ.








