ಬೆಂಗಳೂರು, ಮೇ 26 : ಲಾಕ್ ಡೌನ್ ಸಡಿಲಿಕೆಯ ಬಳಿಕ ಟೊಯೊಟಾ ಕಿರ್ಲೋಸ್ಕರ್ ಮೋಟರ್ ಪ್ರೈವೇಟ್ ಲಿಮಿಟೆಡ್ ಮಂಗಳವಾರದಿಂದ ತನ್ನ ಉತ್ಪಾದನಾ ಘಟಕದಲ್ಲಿ ಕಾರ್ಯಾಚರಣೆ ಪುನರಾರಂಭಿಸಲಿದೆ. ಬೆಂಗಳೂರಿನ ಬಿಡದಿಯಲ್ಲಿರುವ ಉತ್ಪಾದನಾ ಘಟಕವನ್ನು ಹೊಂದಿರುವ ಫಾರ್ಚೂನರ್ ಮತ್ತು ಇನ್ನೋವಾ ಯುಟಿಲಿಟಿ ವಾಹನಗಳ ತಯಾರಕರಾದ ಟೊಯೊಟಾ ಕಿರ್ಲೋಸ್ಕರ್ ಮೋಟರ್ ಪ್ರೈವೇಟ್ ಲಿಮಿಟೆಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸುಮಾರು ಮೂರು ತಿಂಗಳಿನಿಂದ ಕಾರ್ಯಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು.
ಇದೀಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿರ್ದೇಶನದಂತೆ ಪರಿಸ್ಥಿತಿಯನ್ನು ಅವಲೋಕಿಸಿ ಹಂತ ಹಂತವಾಗಿ ಕಾರ್ಯಚರಣೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.290 ಕ್ಕೂ ಹೆಚ್ಚಿನ ಟೊಯೊಟಾ ಮಾರಾಟಗಾರರು ಮತ್ತು ಸುಮಾರು 230 ಸೇವಾ ಮಳಿಗೆಗಳು ಈಗ ಬಿಡಿಭಾಗಗಳ ಪೂರೈಕೆ ಮತ್ತು ವಾಹನ ಸೇವೆಗಳಂತಹ ನಿರ್ದಿಷ್ಟ ಕ್ಷೇತ್ರಗಳಿಗೆ ಸಂಬಂಧ ಪಟ್ಟಂತೆ ಕಾರ್ಯ ನಿರ್ವಹಿಸುತ್ತಿವೆ ಎಂದು ಕಂಪನಿ ತಿಳಿಸಿದೆ. ನಮ್ಮ ಉದ್ಯೋಗಿಗಳ ಸುರಕ್ಷತೆಯು ನಮಗೆ ಬಹಳ ಮಹತ್ವದಾಗಿದ್ದು, ಯಾವುದೇ ಕಾರಣಕ್ಕೂ ಅವರನ್ನು ಅಪಾಯಕ್ಕೆ ದೂಡಲು ನಾವು ಬಯಸುವುದಿಲ್ಲ. ಆದ್ದರಿಂದ ಕೆಲಸ ಮಾಡಲು ಪರಿಷ್ಕೃತ ಮಾರ್ಗಸೂಚಿಗಳನ್ನು ಜಾರಿಗೆ ತಂದಿದ್ದು, ಅದರೊಂದಿಗೆ ಕಾರ್ಯಚರಣಾ ಘಟಕವನ್ನು ಪುನರಾರಂಭ ಮಾಡುತ್ತಿದ್ದೇವೆ ಎಂದು ಟಿಕೆಎಂನ ಉಪ ವ್ಯವಸ್ಥಾಪಕ ನಿರ್ದೇಶಕ ರಾಜು ಬಿ. ಕೆಟ್ಕಲೆ ಹೇಳಿದರು.
ಇತರ ಕಾರು ತಯಾರಕರಿಗಿಂತ ತನ್ನ ಸ್ಥಾವರದಲ್ಲಿ ಕಾರ್ಯಾಚರಣೆಯನ್ನು ಪುನರಾರಂಭಿಸಲು ಟೊಯೋಟಾ ಹೆಚ್ಚಿನ ಸಮಯ ತೆಗೆದುಕೊಂಡಿರುವುದಕ್ಕೆ ಪ್ರತಿಕ್ರಿಯಿಸಿದ ರಾಜು ಬಿ. ಕೆಟ್ಕಲೆ, ನಾವು ಉದ್ದೇಶಪೂರ್ವಕವಾಗಿಯೇ ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳಲು ಬಯಸಿದ್ದೇವೆ. ಏಕೆಂದರೆ ಮುಂಜಾಗ್ರತಾ ಕ್ರಮವಾಗಿ ಕೆಲಸದ ಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಕೆಲಸವನ್ನು ಪುನರಾರಂಭಿಸಲು ಸುರಕ್ಷಿತವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕಿತ್ತು ಎಂದು ಅವರು ಹೇಳಿದ್ದಾರೆ.
ಇತರ ಪ್ರಮುಖ ಕಾರು ತಯಾರಕರಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಮತ್ತು ಹ್ಯುಂಡೈ ಮೋಟರ್ ಇಂಡಿಯಾ ಲಿಮಿಟೆಡ್ ಕಂಪನಿಗಳು ಹರಿಯಾಣ ಮತ್ತು ತಮಿಳುನಾಡಿನ ಸ್ಥಾವರಗಳಲ್ಲಿ ಕಾರ್ಯಾಚರಣೆಯನ್ನು ಪುನರಾರಂಭಿಸಿದ ನಂತರ ಕೆಲವು ಕೊರೊನಾ ಪ್ರಕರಣಗಳು ದೃಢಪಟ್ಟಿದ್ದವು.








