ತ್ರಿವಿಧ ದಾಸೋಹಿ ನಡೆದಾಡುವ ದೇವರ 115ನೇ ಜಯಂತೋತ್ಸವ – ಅಮಿತ್ ಶಾ ಭಾಗಿ
ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ 115ನೇ ಜಯಂತಿ ಹಿನ್ನೆಲೆ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ‘ನಡೆದಾಡುವ ದೇವರ ಬಸವ ಭಾರತ’ ಎಂಬ ತುಮಕೂರು ಸಿದ್ಧಗಂಗಾ ಮಠದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಸಲಾಗುತ್ತಿದೆ.
ಇಂದು (ಏಪ್ರಿಲ್ 1) ದಿನಪೂರ್ತಿ ಕಾರ್ಯಕ್ರಮ ಇರಲಿದ್ದು ಸುಮಾರು 4 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಆಗಮಿಸಿದವರಿಗೆ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮಗಳು ಇರಲಿದೆ.
ಇನ್ನೂ ನಡೆದಾಡುವ ದೇವರ ಜಯಂತೋತ್ಸವ ಹಿನ್ನಲೆಯಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ತುಮಕೂರಿಗೆ ಆಗಮಿಸಿದ್ದಾರೆ. ಸಿದ್ದಗಂಗಾ ಮಠದಲ್ಲಿ ಅಮಿತ್ ಶಾ ಮೇಲೆ ಹೂವಿನ ಮಳೆಗೈದು ಅದ್ಧೂರಿ ಸ್ವಾಗತ ಕೋರಲಾಗಿದೆ. ಬಿಜೆಪಿ ಕಾರ್ಯಕರ್ತರಿಂದ ಅಮಿತ್ ಶಾಗೆ ಅದ್ಧೂರಿ ಸ್ವಾಗತ ಲಭಿಸಿದೆ. ವಿದ್ಯಾರ್ಥಿಗಳು ಅಮಿತ್ ಶಾಗೆ ಪೂರ್ಣಕುಂಭ ಸ್ವಾಗತ ಕೋರಿದ್ದಾರೆ. ನಂತರ ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದ ಶಾ, ಗದ್ದುಗೆಗೆ ಪೂಜೆ ಸಲ್ಲಿಸಿದ್ದಾರೆ.








