ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾವೂ ಒಂದು. ಪವರ್ ಸ್ಟಾರ್ ಸಿನಿಮಾ ಎಂದರೇ ಗಲ್ಲಾ ಪಟ್ಟಿಗೆ ಶೇಕ್ ಆಗೋದು ಪಕ್ಕಾ. ಅದರಲ್ಲೂ ಈ ಸಿನಿಮಾದ ಮೇಲೆ ಅಪ್ಪು ಅಭಿಮಾನಿಗಳಲ್ಲದೇ ಸಿನಿರಸಿಕರಲ್ಲೂ ಸಾಕಷ್ಟು ಕುತೂಹಲ ಮನೆ ಮಾಡಿದೆ. ಇದಕ್ಕೆ ಕಾರಣ ಈ ಚಿತ್ರದ ಕಾಂಬಿನೇಷನ್. ಅಂದರೆ ರಾಜಕುಮಾರ ಸಿನಿಮಾದ ಬಳಿಕ ನಿರ್ದೇಶಕ ಸಂತೋಷ್ ಆನಂದ್ ರಾಮ್- ಪುನೀತ್ ಮತ್ತೆ ಒಂದಾಗಿದ್ದಾರೆ. ಈ ಇಬ್ಬರ ಕಾಂಬಿನೇಷನ್ ನಲ್ಲಿ ಬಂದಿದ್ದ ರಾಜಕುಮಾರ ಭಾರಿ ಜಯ ಸಾಧಿಸಿತ್ತು. ಅಲ್ಲದೇ ಎಷ್ಟೋ ದಿನಗಳಿಂದ ಚಿತ್ರಮಂದಿರದ ಕಡೆ ಮುಖಮಾಡದವರನ್ನೂ ರಾಜಕುಮಾರ ಥಿಯೇಟರ್ ಗಳತ್ತ ಕರೆದುಕೊಂದು ಬಂದಿದ್ದ. ಒಂದು ಮಾತಿನಲ್ಲಿ ಹೇಳಬೇಕಾದರೇ ಚಂದನವನದ ಮಟ್ಟಿಗೆ ರಾಜಕುಮಾರ ಸೂಪರ್ ಡೂಪರ್ ಹಿಟ್ ಸಿನಿಮಾ.
ಈ ಕಾರಣಕ್ಕಾಗಿಯೇ ಯುವರತ್ನ ಸಿನಿಮಾ ಕೂಡ ಸಾಕಷ್ಟು ನಿರೀಕ್ಷೆಯನ್ನೂ ಹುಟ್ಟಿಹಾಕಿದೆ. ಮಾಸ್ ಅಂಡ್ ಕ್ಲಾಸ್ ಅಭಿಮಾನಿಗಳು ಈ ಸಿನಿಮಾಗಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ.
ಡಬ್ಬಿಂಗ್ ಕೆಲ್ಸ ಶುರು
ಯುವರತ್ನ ಸಿನಿಮಾದ ಶೂಟಿಂಗ್ ಬಹುತೇಕ ಮುಗಿಯುವ ಹಂತಕ್ಕೆ ತಲುಪಿತ್ತು. ಎರಡು ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಉಳಿದಿತ್ತು. ಇದರ ಒಂದು ಹಾಡಿಗೆ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಇರಲಿದ್ದು, ವಿದೇಶದಲ್ಲಿ ಶೂಟಿಂಗ್ ಪ್ಲಾನ್ ಇತ್ತು. ಆದ್ರೆ ಕೊರೊನಾ ಭೀತಿಯಿಂದಾಗಿ ಶೂಟಿಂಗ್ ಆರಂಭವಾಗಿರಲಿಲ್ಲ. ಲಾಕ್ ಡೌನ್ ಸಡಿಲಿಕೆ ಬಳಿಕ ಇದೀಗ ಯುವರತ್ನ ಸಿನಿಮಾದ ಡಬ್ಬಿಂಗ್ ಕೆಲ್ಸ ಶುರುವಾಗಿದೆ.
ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸರ್ಕಾರ ಅವಕಾಶ ನೀಡಿದ ಹಿನ್ನೆಲೆ ಯುವರತ್ನ ಚಿತ್ರತಂಡ ಡಬ್ಬಿಂಗ್ ಕೆಲಸ ಆರಂಭಿಸಿದೆ. ಬ್ಯಾಕ್ ಆನ್ ಟ್ರ್ಯಾಕ್ ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಟ್ವೀಟ್ ಮಾಡಿದ್ದು, ಸೆಕೆಂಡ್ ಹಾಫ್ ಡಬ್ಬಿಂಗ್ ಕೆಲಸ ಆರಂಭವಾಗಿದೆ ಎಂದಿದ್ದಾರೆ.








